

ರೇವಾ (ಮಧ್ಯಪ್ರದೇಶ): ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಸಂಪರ್ಕಕ್ಕೆ ಬಂದಿರುವ ರೇವಾದ ಬಿಜೆಪಿ ಶಾಸಕರೊಬ್ಬರಿಗೆ ಕರೊನಾ ಸೋಂಕು ತಗುಲಿದೆ.
ಜೂನ್ 19 ರಂದು ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಇಬ್ಬರು ಶಾಸಕರು ಸಂಪರ್ಕಕ್ಕೆ ಬಂದಿದ್ದರು. ಜೂನ್ 20ರಂದು ಕಾಂಗ್ರೆಸ್ ಶಾಸಕನಿಗೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರ ಗಂಟಲದ್ರವದ ಮಾದರಿಯನ್ನು ಪರಿಶೀಲಿಸಿದಾಗ ಸೋಂಕು ದೃಢಪಟ್ಟಿತ್ತು.
ಚುನಾವಣೆಯ ಸಂದರ್ಭದಲ್ಲಿ ಈ ಶಾಸಕನ ಸಂಪರ್ಕಕ್ಕೆ ಬಂದಿರುವ ಅನೇಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಬಿಜೆಪಿ ಶಾಸಕನಿಗೂ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಆರ್.ಎಸ್. ಪಾಂಡೆ ತಿಳಿಸಿದ್ದಾರೆ.
ಈ ಮೂಲಕ ಮಧ್ಯಪ್ರದೇಶದಲ್ಲಿ ಒಂದೇ ತಿಂಗಳಿನಲ್ಲಿ ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್‌ನ ಒಬ್ಬ ಶಾಸಕನಿಗೆ ಸೋಂಕು ತಗುಲಿದೆ. ಸೋಂಕಿತ ವ್ಯಕ್ತಿಗಳ ಹೆಸರು ಬಹಿರಂಗಗೊಳಿಸಬಾರದು ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಸದ್ಯ ಯಾವುದೇ ಶಾಸಕರ ಹೆಸರು ಬಹಿರಂಗಗೊಳಿಸಿಲ್ಲ.