

ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ್ದು ತಪ್ಪು ಎಂದು ಆರೋಪಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ, ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
"ತಮಿಳುನಾಡಿಗೆ 5,000 ಕ್ಯೂ.ಸೆಕ್ ನೀರು ಹರಿಸುವಂತೆ ಕಾವೇರಿ ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಸರ್ಕಾರ ಧಿಕ್ಕರಿಸಲಿ. ರಾಜ್ಯದ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ, ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ" ಎಂದು ಹೇಳಿದರು.
"ಇವರ ರಾಜಕೀಯ ಒಕ್ಕೂಟಕ್ಕಾಗಿ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಹರಿಸಿದ್ದು ಅಕ್ಷಮ್ಯ ಅಪರಾಧ. ಸರ್ಕಾರ ಹಾಗು ಅಧಿಕಾರಿಗಳು ಕರ್ನಾಟಕದ ಬರ ಪರಿಸ್ಥಿತಿಯನ್ನು ಕಾವೇರಿ ನಿಯಂತ್ರಣ ಪ್ರಾಧಿಕಾರದ ಮುಂದೆ ಮಂಡಿಸುವುದರಲ್ಲಿ ವಿಫಲರಾಗಿದ್ದಾರೆ" ಎಂದು ಹೇಳಿದರು.
"ರಾಜಕೀಯ ಹೊರತುಪಡಿಸಿ ನಾಡಿನ ಹಿತದೃಷ್ಟಿಗಾಗಿ ನಾವು ಸರ್ಕಾರದ ಜತೆ ನಿಲ್ಲುತ್ತೇವೆ. ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ನಿಲ್ಲಿಸಲಿ" ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.