More

  ಲೋಕ ಗೆಲ್ಲಲು ಬಿಜೆಪಿ ಸಂಕಲ್ಪಪತ್ರ: ವಿಶೇಷ ಜನಮತ ಅಭಿಯಾನಕ್ಕೆ ಚಾಲನೆ

  ಬೆಂಗಳೂರು: ಚುನಾವಣೆ ಪ್ರಣಾಳಿಕೆ ಬದಲು ಈ ಬಾರಿ ಜನರ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡ ‘ಸಂಕಲ್ಪ ಪತ್ರ’ದ ಆಧಾರದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ತೀರ್ವನಿಸಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ‘ವಿಕಸಿತ ಭಾರತ ಸಂಕಲ್ಪ ಪತ್ರ’ಕ್ಕೆ ಅಭಿಪ್ರಾಯ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಸ್ವಾತಂತ್ರ್ಯದ ಶತಮಾನೋತ್ಸವ ವರ್ಷ (2047)ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಪೂರಕವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಕಸಿತ ಭಾರತ ಸಂಕಲ್ಪ ಪತ್ರದ ಮೂಲಕ ಜನರ ಅಭಿಪ್ರಾಯ ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಿದ್ದಾರೆ.

  ಮೂರು ಲಕ್ಷ ಜನರ ಅಭಿಪ್ರಾಯ ಸಂಗ್ರಹ: ಕರ್ನಾಟಕದಲ್ಲಿ ಮಾ.3 ರಿಂದ 15ರವರೆಗೆ ಸಾಮಾನ್ಯ ಜನರು, ರೈತರು, ಬಡವರು, ಮಹಿಳೆಯರು, ದುಡಿಯುವ ವರ್ಗಗಳು, ಯುವ ಜನರು, ಉದ್ಯಮಿಗಳು, ವರ್ತಕರು, ಗಣ್ಯರು, ತಜ್ಞರು ಸೇರಿ ಎಲ್ಲ ವರ್ಗದವರಿಂದ ಅಭಿಪ್ರಾಯ ಸಂಗ್ರಹಿಸುವ ಗುರಿಯಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

  ಅಭಿಯಾನವನ್ನು ಅಚ್ಚುಕಟ್ಟು, ಅರ್ಥಪೂರ್ಣವಾಗಿ ನಿರ್ವಹಿಸಲೆಂದು ಡಿಜಿಟಲ್ ಮಾಧ್ಯಮ, ಲಿಖಿತವಾಗಿ ಅಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆಯಾಗಿದೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಲಹಾ ಪೆಟ್ಟಿಗೆ ಇರಿಸಲಾಗುತ್ತದೆ. ಜತೆಗೆ ‘ನಮೋ ಆಪ್’, 9090902024ಗೆ ಮಿಸ್ಡ್ ಕಾಲ್ ಮಾಡಿದರೆ ಲಿಂಕ್ ಲಭಿಸಲಿದ್ದು, ಆ ಮೂಲಕ ಮೌಖಿಕ ಅಥವಾ ವಾಟ್ಸ್ ಆಪ್ ಮುಖೇನ ಸಲಹೆ, ಅಭಿಪ್ರಾಯಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

  ಎಲ್ಲರ ಭಾವನೆಗೆ ಗೌರವ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಎಲ್ಲ ಕ್ಷೇತ್ರಗಳು, ವರ್ಗಗಳು, ಸಾಮಾನ್ಯ ಜನರ ಅಭಿಪ್ರಾಯ, ಭಾವನೆಗಳನ್ನು ಗೌರವಿಸುವುದು ಸಂಕಲ್ಪ ಪತ್ರ ಅಭಿಯಾನದ ಉದ್ದೇಶವಾಗಿದೆ ಎಂದರು. ಬೀದಿ ಬದಿ ವ್ಯಾಪಾರಸ್ಥರಿಂದ ದೊಡ್ಡ ಉದ್ಯಮಿಗಳವರೆಗೆ ಅಭಿಪ್ರಾಯ ಸಂಗ್ರಹಿಸಲಿದ್ದು, ಜನಪರ ಆಡಳಿತ, ಜನ ಕೇಂದ್ರಿತ ಅಭಿವೃದ್ಧಿ, ಎಲ್ಲರನ್ನು ಒಳಗೊಂಡು ವಿಕಸಿತ ಭಾರತವಾಗಬೇಕು ಎನ್ನುವುದು ಮೋದಿಯವರ ದೃಢ ನಿಶ್ಚಯವಾಗಿದೆ ಎಂದು ಹೇಳಿದರು.

  ಕಲಬುರಗಿ ಬೆಳಗಾವಿ ಪ್ರವಾಸ: ವಿಧಾನಸಭೆ ಪ್ರತಿಪಕ್ಷ ನಾಯಕ ಮಾ. 4ರಂದು ಕಲಬುರಗಿ, 5ರಂದು ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದಾರೆ. ಬಿ.ವೈ.ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು 4, 5ರಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಆರ್.ಅಶೋಕ್ 4ರಂದು ಕಲಬುರಗಿಯಲ್ಲಿ ಅಯೋಧ್ಯೆಗೆ ತೆರಳಲಿರುವ ಭಕ್ತರ ರೈಲು ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸುವರು. ನಂತರ ಆಳಂದ ತಾಲೂಕಿನ ಸರಸಂಬ ಗ್ರಾಮದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಹನುಮಂತಪ್ಪ ಆಲೂರೆ ನಿವಾಸ, ಅಫಜಲಪುರ ತಾಲೂಕಿನ ಗ್ರಾಮದ ಗಿರೇಶ್ ಚಕ್ರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದು, ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡುವರು. ಮಂಗಳವಾರ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 5ಕ್ಕೆ ಕೆಎಲ್​ಇ ಸಭಾಂಗಣದಲ್ಲಿ ನಡೆಯುವ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳುವರು. ವಿಜಯೇಂದ್ರ ಸೋಮವಾರ ಸಂಜೆ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದು, ಜೆ.ಪಿ.ನಡ್ಡಾ ಅವರೊಂದಿಗೆ ಕೋರ್ ಕಮಿಟಿ ಸಭೆ, ಚಿಕ್ಕೋಡಿಯಲ್ಲಿ ಮಂಗಳವಾರ ನಡೆಯಲಿರುವ ಬೂತ್ ಕಾರ್ಯಕರ್ತರ ಸಮಾವೇಶ, ನಂತರ ಬೆಳಗಾವಿಯಲ್ಲಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳುವರು.

  ಚುನಾವಣೆ ಬಳಿಕ ಸಿಎಂ ಬದಲು?: ಕಾಂಗ್ರೆಸ್ ಸರ್ಕಾರ ಎಲ್ಲ ರೀತಿಯಿಂದಲೂ ಟ್ರಾ್ಯಕ್ ತಪ್ಪಿದೆ. ಅಭಿವೃದ್ಧಿಯನ್ನೂ ಕಡೆಗಣಿಸಿದೆ. ಅನುದಾನವಿಲ್ಲದೆ ಶಾಸಕರು ಮುನಿಸಿಕೊಂಡಿದ್ದರೆ, ಒಂಬತ್ತು ತಿಂಗಳ ಅವಧಿಯಲ್ಲಿ ಜನರೂ ರೋಸಿ ಹೋಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು. ಕಾಂಗ್ರೆಸ್, ಮಂತ್ರಿ ಮಂಡಲದೊಳಗೆ ಎಲ್ಲವೂ ಸರಿಯಿಲ್ಲವೆಂಬುದು ಸಚಿವರ ಮಾತು, ವರ್ತನೆಗಳಿಂದ ಗೊತ್ತಾಗುತ್ತದೆ. ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೂ ಅಚ್ಚರಿಯಿಲ್ಲವೆಂದು ಆರ್.ಅಶೋಕ್ ಭವಿಷ್ಯ ನುಡಿದರು.

  ಮೊದಲ ಅಭಿಪ್ರಾಯ ಸಲ್ಲಿಕೆ:ಪಕ್ಷದ ಕಚೇರಿಯಲ್ಲಿಟ್ಟಿದ್ದ ಸಲಹಾ ಪೆಟ್ಟಿಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮೊದಲು ಲಿಖಿತ ಅಭಿಪ್ರಾಯ ಹಾಕಿದರು. ಅಭಿಯಾನದ ಸಹ ಸಂಚಾಲಕಿ, ಚಿತ್ರನಟಿ ಮಾಳವಿಕಾ ಅವರು ಸಂಕಲ್ಪಪತ್ರಕ್ಕೆ ಡಿಜಿಟಲ್ ವೇದಿಕೆ, ನಮೋ ಆಪ್ ಬಳಸಿಕೊಳ್ಳಲು ಜನರಿಗೆ ಮನವಿ ಮಾಡಿದರು.

  ‘ವಿಕಸಿತ ಭಾರತ- ಇದು ಮೋದಿ ಗ್ಯಾರಂಟಿ’ ಈ ವಿಷಯದ ಕುರಿತು ರಾಜ್ಯಾದ್ಯಂತ ವಿಡಿಯೋ ವ್ಯಾನ್ ಹಾಗೂ ಸಲಹಾ ಪೆಟ್ಟಿಗೆಗಳ ಮೂಲಕ ಮುಂದಿನ 5 ವರ್ಷಗಳ ಗುರಿ ಕುರಿತು ರಾಜ್ಯದ ಜನರ ಆಶೀರ್ವಾದ ಪಡೆದು, ಸಲಹೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

  | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

  ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts