ಕಾರ್ಕಳ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಸುರಕ್ಷತೆ ಅಸ್ಥಿರವಾಗಿದೆ. ಉಗ್ರರ ದಾಳಿಗೆ ಸೈನಿಕರು, ಅಮಾಯಕರು ಬಲಿಯಾಗಿದ್ದು, ದೇಶದ ಭದ್ರತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲು ಕಾರ್ಕಳ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್, ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಸಮಿತಿ, ಎನ್‌ಎಸ್‌ಯುಐ ಆಶ್ರಯದಲ್ಲಿ ಆಯೋಜಿಸಿದ್ದ ಪಂಜಿನ ಮೆರವಣಿಗೆ, ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಹಿಂದು, ಮುಸ್ಲಿಂ ವಿಚಾರ ಪ್ರಸ್ತಾಪಿಸಿ ಜನರಲ್ಲಿ ದ್ವೇಷ ಭಾವನೆ ಮೂಡಿಸುತ್ತಿದೆ. ಕಾರ್ಕಳದ ಶಾಸಕರು ಪರಶುರಾಮನ ವಿಚಾರದಲ್ಲಿ ಅನ್ಯಾಯ ಮಾಡಿದ್ದು, ಇದು ಧರ್ಮ ವಿರೋಧಿ ಕಾರ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸುರಯ್ಯ ಅಂಜುಂ, ಮುಖಂಡರಾದ ಶೇಖರ್ ಮಡಿವಾಳ, ಗೋಪಿನಾಥ್ ಭಟ್, ಕೃಷ್ಣ ಶೆಟ್ಟಿ ಬಜಗೋಳಿ, ಸೂರಜ್ ಶೆಟ್ಟಿ, ಮಲ್ಲಿಕ್, ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು. ಅನಂತಶಯನ ವೃತ್ತದಿಂದ ಬಸ್ ನಿಲ್ದಾಣದ ತನಕ ಪಂಜಿನ ಮೆರವಣಿಗೆ ನಡೆಯಿತು.