

ನವದೆಹಲಿ: ಕಳೆದ 7 ವರ್ಷಗಳಿಂದ ಕಾರ್ಪೆರೇಟ್ ಸಂಸ್ಥೆಗಳು ಸೇರಿ ಇತರ ಮೂಲಗಳಿಂದ ದೇಣಿಗೆ ಸಂಗ್ರಹಿಸುವಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿದೆ. 2012-13 ರಿಂದ 2018-19ರ ನಡುವೆ ಎಲ್ಲ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ದೇಣಿಗೆ 2,818.05 ಕೋಟಿ ರೂ. ಆಗಿದೆ. ಇದರಲ್ಲಿ ಶೇಕಡ 82.3 ಅಂದರೆ 2,319.48 ಕೋಟಿ ರೂ.ನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಲ್ಲಿ ತಿಳಿಸಿದೆ. ರಾಜಕೀಯ ಪಕ್ಷಗಳು ಪ್ರತಿವರ್ಷ ಪಡೆದ ದೇಣಿಗೆ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತವೆ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ನ ದೇಣಿಗೆ ಸಂಗ್ರಹ ಕಡಿಮೆ ಇದೆ. ಕಳೆದ 7 ವರ್ಷಗಳಲ್ಲಿ 376.02 ಕೋಟಿ ರೂ.ದೇಣಿಗೆ ಪಡೆದಿದೆ. ಎನ್ಸಿಪಿ 69.81 ಕೋಟಿ ರೂ., ತೃಣಮೂಲ ಕಾಂಗ್ರೆಸ್ 45.01 ಕೋಟಿ ರೂ., ಸಿಪಿಐ-ಎಂ 7.5 ಕೋಟಿ ರೂ. ಮತ್ತು ಸಿಪಿಐ 22 ಲಕ್ಷ ರೂ. ದೇಣಿಗೆ ಪಡೆದಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2012-13ರಲ್ಲಿ ಬಿಜೆಪಿಗೆ 72.99 ಕೋಟಿ ರೂ. ದೇಣಿಗೆ ಹರಿದುಬಂದಿತ್ತು. ಅದು ಮುಂದಿನ ಹಣಕಾಸು ವರ್ಷಕ್ಕೆ 156.98 ಕೋಟಿ ರೂ.ಗೆ ಏರಿಕೆಯಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್ ಆ ವರ್ಷ ಕೇವಲ 7.54 ಕೋಟಿ ರೂ.ದೇಣಿಗೆ ಸಂಗ್ರಹಿಸಿತ್ತು.
ರಾಷ್ಟ್ರೀಯ ಪಕ್ಷಗಳು ಕಾರ್ಪೆರೇಟ್ ಸಂಸ್ಥೆಗಳಿಂದ ದೇಣಿಗೆ ಪಡೆಯುವ ಪ್ರಮಾಣ ಶೇಕಡ 131ರಷ್ಟು ಹೆಚ್ಚಾಗಿದೆ ಎಂದು ಎಡಿಆರ್ ತಿಳಿಸಿದೆ. 2018-19ರ ಹಣಕಾಸು ವರ್ಷದಲ್ಲಿ 1,573 ಕಾಪೋರೇಟ್ ಕಂಪನಿಗಳಿಂದ ಬಿಜೆಪಿಗೆ 698.08 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಕಾಂಗ್ರೆಸ್ 122.5 ಕೋಟಿ ರೂ. ದೇಣಿಗೆ ಪಡೆದಿದೆ. 2018-19ರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿಗೆ ಟಾಟಾ ಸಮೂಹದ ಪ್ರೊಗ್ರೆಸ್ಸಿವ್ ಎಲೆಕ್ಟ್ರಾಲ್ ಟ್ರಸ್ಟ್ ಪ್ರಮುಖ ದೇಣಿಗೆದಾರ ಸಂಸ್ಥೆಯಾಗಿದ್ದು, ಒಂದೇ ವರ್ಷದಲ್ಲಿ ಮೂರು ಪಕ್ಷಗಳಿಗೆ ಮೂರು ಬಾರಿಗಳಲ್ಲಿ ಒಟ್ಟು 455.15 ಕೋಟಿ ರೂ. ದೇಣಿಗೆ ನೀಡಿದೆ.