

ನವದೆಹಲಿ: ದೇಶಾದ್ಯಂತ 2024ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಂದು (ಜೂ.1) ಪ್ರಕಟವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇದೆ ಎನ್ನುವುದ ಎಕ್ಸಿಟ್ ಪೋಲ್ನಲ್ಲಿ ಬಯಲಾಗಿದೆ.
2019ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಬಿಜೆಪಿ ಈ ಬಾರಿಯೂ ಅದೇ ಓಟವನ್ನು ಮುಂದುವರಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ, ತೃಣಮೂಲ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಲಿದೆ ಎಂದು ಕೆಲವು ಸಮೀಕ್ಷೆಗಾರರು ಭವಿಷ್ಯ ನುಡಿದಿದ್ದಾರೆ.
ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಬಿಜೆಪಿ ಪಕ್ಷ 21-25 ಮತ್ತು ತೃಣಮೂಲ ಕಾಂಗ್ರೆಸ್ಗೆ 16-21 ಸ್ಥಾನ ಸಿಗಲಿದೆ ಎಂದು ಹೇಳಿದೆ. ಇಂಡಿಯಾ ನ್ಯೂಸ್ - ಡಿ-ಡೈನಾಮಿಕ್ಸ್ ಪ್ರಕಾರ, ಬಿಜೆಪಿ ಪಕ್ಷವು 21 ಸ್ಥಾನಗಳನ್ನು ಗೆಲ್ಲಲು ಸಿದ್ಧವಾಗಿದೆ. ಟಿಎಂಸಿ 19 ಸ್ಥಾನಗಳಿಗೆ ತೃಪ್ತಿ ಪಡೆದುಕೊಳ್ಳಲಿದೆ ಎಂದು ಹೇಳಿದೆ. ಕಳೆದ ಬಾರಿ ತೃಣಮೂಲ 22 ಕ್ಷೇತ್ರಗಳನ್ನು ಗೆದ್ದಿತ್ತು.
ಎಬಿಪಿ ಎಕ್ಸಿಟ್ ಪೋಲ್ ಕೂಡ ಬಿಜೆಪಿ 23 ರಿಂದ 27 ಸ್ಥಾನ ಪಡೆಯುವ ಮೂಲಕ ಭರ್ಜರಿಯಾಗಿ ಜಯ ಸಾಧಿಸಲಿದೆ ಎಂದು ಹೇಳಿದೆ. ಇತ್ತ ಟಿಎಂಸಿಗೆ 13 ರಿಂದ 17 ಸ್ಥಾನ ಸಿಗಲಿದ್ದು INC+ ಗೆ 1 ರಿಂದ 3 ಸ್ಥಾನ ಸಿಗಲಿದೆ ಎನ್ನಲಾಗ್ತಿದೆ.
2019 ರ ಲೋಕಸಭಾ ಚುನಾವಣೆ ರಿಸಲ್ಟ್ ಏನಾಗಿತ್ತು?: 2019 ರ ಲೋಕಸಭಾ ಚುನಾವಣೆಯಲ್ಲಿ, ಟಿಎಂಸಿ 22 ಸ್ಥಾನಗಳನ್ನು ಗೆದ್ದ ನಂತರ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಸ್ಪಷ್ಟವಾದ ಪ್ರವೇಶವನ್ನು ಮಾಡಿತು. ಕಾಂಗ್ರೆಸ್ಗೆ ಕೇವಲ 2 ಸ್ಥಾನಗಳು ಲಭಿಸಿತ್ತು. ಬಿಜೆಪಿ 19 ರಿಂದ 23 ಸ್ಥಾನಗಳನ್ನು ಮತ್ತು ತೃಣಮೂಲ 19 ರಿಂದ 22 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಈ ಬಾರಿಯೂ 2 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗಿದೆ.