ಅಬಕಾರಿ ನೀತಿ ಹಗರಣ| ಕೇಜ್ರಿವಾಲ್​ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರೊಟೆಸ್ಟ್​; ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಆಪ್ ಯತ್ನ

BJP Protest
Published on

ನವದೆಹಲಿ: ಈ ಹಿಂಧೆ ದೆಹಲಿ ಸರ್ಕಾರ ಜಾರಿಗೆ ತರಲು ಉದ್ಧೇಶಿಸಿದ್ದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧಿಕಾರದಲ್ಲಿ ಮುಂದುವರೆಯಬಾರದು ಎಂದು ಬಿಜೆಪಿ ಒತ್ತಡ ಹೇರತೊಡಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ದೆಹಲಿ ಬಿಜೆಪಿ ಘಟಕದ ನಾಯಕರು ಹಾಗೂ ಕಾರ್ಯಕರ್ತರು ಸೆಕ್ರೆಟರಿಯೇಟ್‌ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಪ್ರತಿಭಟನಾ ನಿರತರು ಪೊಲೀಸ್​ ಬ್ಯಾರಿಕೇಡ್​ಗಳನ್ನು ಭೇದಿಸಿ ಮುನ್ನುಗುತ್ತಿರುವುದನ್ನು ನೋಡಬಹುದಾಗಿದೆ. ಇ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಇತ್ತ ಬಿಜೆಪಿಗೆ ಪ್ರತಿಯಾಗಿ ಆಮ್​ ಆದ್ಮಿ ಪಕ್ಷವು ಕೇಜ್ರಿವಾಲ್​ ಬಂಧನ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂಭಾಗ ಪ್ರತಿಭಟನೆ ನಡೆಸುತ್ತಿದೆ. ಕೇಜ್ರಿವಾಲ್‌ ಅವರನ್ನು ಅಬಕಾರಿ ನೀತಿ ಹೆಸರಿನಲ್ಲಿ ಅನಗತ್ಯವಾಗಿ ಸಿಲುಕಿಸಿ ಬಂಧಿಸಲಾಗಿದೆ. ಅವರ ಪಾತ್ರವೇನೂ ಇದರಲ್ಲಿ ಇಲ್ಲ. ಇದರ ಹಿಂದೆ ರಾಜಕೀಯ ಅಡಗಿದೆ. ಲೋಕಸಭೆ ಚುನಾವಣೆಯಲ್ಲಿ ಆಪ್‌ ಪ್ರಭಾವ ತಗ್ಗಿಸಲು ಕೇಜ್ರಿವಾಲ್‌ ಬಂಧನವಾಗಿರುವ ಅನುಮಾನಗಳಿದ್ದು. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಪ್‌ ಮುಖಂಡರು ಆಗ್ರಹಿಸಿದ್ದಾರೆ.

ಈ ವೇಳೆ ಪ್ರತಿಭಟನಾ ನಿರತರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಆಪ್​ ಮುಖಂಡರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಎಎಪಿ ನಾಯಕರು ಘೇರಾವ್​ ಹಾಕಿದ್ದಾರೆ. ಪ್ರಧಾನಿ ನಿವಾಸ ಸೇರಿದಂತೆ ದೆಹಲಿಯ ಪ್ರಮುಖ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net