

ಗೋಕರ್ಣ: ಸಮುದ್ರದ ಅಲೆಗಳಲ್ಲಿ ಕಾಣಸಿಗುವ ನಿಸರ್ಗದ ಅತಿ ಅಪರೂಪದ ನೀಲಿಮ ಬೆಳಕಿನ ಆಟ ಈ ವರ್ಷ ಗೋಕರ್ಣದ ಪ್ರಸಿದ್ಧ ಕುಡ್ಲೆ ಬೀಚ್ ಸಮುದ್ರದ ಅಲೆಗಳಲ್ಲಿ ಗೋಚರಿಸಿ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ಸಮುದ್ರದ ಅಲೆಗಳಿಂದ ಹೊರ ಸೂಸುವ ಹೊಳೆವ ನೀಲಿ ಪ್ರಭೆಗೆ ಜನ ಮಾರುಹೋಗಿದ್ದಾರೆ. ಮಳೆಗಾಲ ಮುಗಿದು ಚಳಿ ಪ್ರಾರಂಭವಾಗುವ ಸಂಧಿಕಾಲದ ಕೆಲವೇ ದಿನಗಳಲ್ಲಿ ಮಾತ್ರ ಪ್ರಕೃತಿಯ ಈ ವಿಸ್ಮಯ ನೋಡ ಸಿಗುತ್ತದೆ. ಸೂರ್ಯಾಸ್ತವಾಗಿ ಕತ್ತಲು ಆವರಿಸುತ್ತಿರುವಂತೆ ಅಲೆಗಳಲ್ಲಿ ಈ ನೀಲಿಮ ಬೆಳಕಿನ ಝುಗಮಗ ಮಾಯಾ ಲೋಕ ತೆರೆದುಕೊಳ್ಳುತ್ತದೆ.
ಆಲ್ಗೇ ಅಥವಾ ಅಗ್ಗಿಜರಿ: ಜೈವಿಕ ಶಾಸ್ತ್ರದಲ್ಲಿ ಇದನ್ನು ಆಲ್ಗೇ ಎಂದೂ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಅಗ್ಗಿಜರಿ ಎಂದೂ ಕರೆಯಲಾಗುತ್ತದೆ. ಜೈವಿಕ ಪರಿಭಾಷೆಯಲ್ಲಿ ಈ ನಿಸರ್ಗ ವೈಚಿತ್ರಕ್ಕೆ ಜೈವಿಕ ಪ್ರಭೆ ಅಥವಾ ಜೈವಿಕ ಬೆಳಕು (ಬಯೋಲ್ಯುಮಿನೆಸೆನ್ಸ್) ಎನ್ನಲಾಗುತ್ತದೆ. ಇದಲ್ಲದೆ ಈ ಪ್ರಭೆಯ ಪ್ರವಾಹಕ್ಕೆ ವೈಜ್ಞಾನಿಕವಾಗಿ ಶೀತಲ ದೀಪ(ಕೋಲ್ಡ್ ಲೈಟ್), ವಿಕಿರಣ ಪ್ರಭೆ, ವಿದ್ಯುತ್ ಪ್ರಭೆ,ರಸ ಪ್ರಭೆ, ಮಣಿ ಪ್ರಭೆ ಎಂಬ ಹಲವು ನಾಮಗಳ ಉಲ್ಲೇಖವಿದೆ.
ಸಮುದ್ರದ ಅಲೆಗಳಲ್ಲಿ ವರ್ಷದಲ್ಲಿ ಮಳೆ-ಚಳಿಯ ಸಂಗಮ ಸಮಯದ ಒಂದೆರಡು ವಾರ ಮಾತ್ರ ಇದು ದೃಗ್- ಗೋಚರವಾಗಿದೆ. ಸಮುದ್ರದ ಬಂಡೆಗಳಲ್ಲಿ ಬೆಳೆದು ಜೀವಿಸುವ ಇಂತಹ ಶಿಲೀಂದ್ರ ಜೀವಿಗಳು ವರ್ಷದಲ್ಲಿ ಈ ದಿನಗಳಲ್ಲಷ್ಟೇ ಅಲೆಗಳಲ್ಲಿ ತೇಲಿ ಪ್ರಭೆಯ ಹಾಸು ಕಾಣಲು ಕಾರಣವಾಗುತ್ತವೆ. ಕಾಂತಿಯುಕ್ತ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳು ಬೆರೆತು ಸಹಜೀವನ ನಡೆಸುವುದರಿಂದ ಇಂತಹ ಭ್ರಮಾಲೋಕ ಸೃಷ್ಟಿಗೊಳ್ಳುತ್ತದೆ ಎಂದು ಜೈವಿಕ ಶಾಸ್ತ್ರದ ವಿವರಣೆಯಾಗಿದೆ.