

Davangere DC : ಬೈಕ್ ಸವಾರನೊಬ್ಬ ಸಂಚಾರ ನಿಯಮ ಉಲ್ಲಂಘಿಸುವ ಜತೆಗೆ, ತನ್ನ ಎದುರಿಗೆ ಬಂದವರು ಜಿಲ್ಲಾಧಿಕಾರಿ ಎನ್ನುವ ಪ್ರಜ್ಞೆಯೂ ಇಲ್ಲದೇ ಅವರಿಗೇ ಅವಾಜ್ ಹಾಕಿ ಸಂಕಷ್ಟಕ್ಕೆ ಸಿಲುಕಿದ್ದಾನೆ!
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ನಗರದ ರಿಂಗ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಎಂದಿನಂತೆ ಬೈಸಿಕಲ್ ಸವಾರಿ ಮಾಡುತ್ತಿದ್ದರು. ಶಾರದಾಂಬಾ ವೃತ್ತದ ಬಳಿ ಇದ್ದಕ್ಕಿದ್ದಂತೆ ಬೈಕ್ ಸವಾರನೊಬ್ಬ ಸಂಚಾರ ನಿಯಮ ಉಲ್ಲಂಘಿಸಿ ಎದುರಿನಿಂದ ಬಂದ. ತಮ್ಮ ಕಣ್ಣೆದುರೇ ಈ ಅನುಭವ ಆದಾಗ ಡಿಸಿ ಬೈಕ್ ಸವಾರನಿಗೆ ಬುದ್ಧಿ ಹೇಳಿದ್ದಾರೆ. ಸಂಚಾರ ನಿಯಮ ಪಾಲಿಸಬೇಕು ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.
ಆದರೆ ಅದನ್ನು ಕೇಳುವ ಮನಃಸ್ಥಿತಿ ಆತನಿಗೆ ಇರಲಿಲ್ಲ. ‘ಇದನ್ನು ಕೇಳಲು ನೀನ್ಯಾರು’ ಎಂದು ಆತ ಏಕ ವಚನದಲ್ಲೇ ಆವಾಜ್ ಹಾಕಿದ್ದಾನೆ. ಉದ್ಧಟತನ ತೋರಿದ ಆ ವ್ಯಕ್ತಿಯ ವಾಹನದ ಫೋಟೋ ತೆಗೆದ ಜಿಲ್ಲಾಧಿಕಾರಿ, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ದೂರು ನೀಡಿದ್ದಾರೆ.
ವಾಹನದ ನಂಬರ್ ಆಧರಿಸಿ ಪೊಲೀಸರು ಬೈಕ್ ಸವಾರನ ಹುಡುಕಾಟದಲ್ಲಿದ್ದಾರೆ. ಈ ವಿಷಯವನ್ನು ಸ್ವತಃ ಡಿಸಿ ಅವರೇ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೈಕ್ ಸವಾರನಿಗೆ ಭಾರಿ ದಂಡ ಹಾಕಿಸಿ ವಾಹನ ವಶಕ್ಕೆ ಪಡೆಯುತ್ತೇವೆ. ಒಂದೆರಡು ಪ್ರಕರಣಗಳಲ್ಲಿ ಈ ರೀತಿ ಬಿಸಿ ಮುಟ್ಟಿಸಿದರೆ ಸಾರ್ವಜನಿಕರಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ಹೇಳಿದ್ದಾರೆ.