

ಉಡುಪಿ: ವಿದ್ಯುತ್ ಗುತ್ತಿಗೆದಾರರೊಬ್ಬರ ನಿರ್ಲಕ್ಷ್ಯದಿಂದಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ. ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕೊರಳಿಗೆ ಉರುಳಿನಂತೆ ಸಿಕ್ಕಿಹಾಕಿಕೊಂಡಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕು ಆಲಗದ್ದೆ ಯರುಕೋಣೆ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು. ಬೈಂದೂರಿನ ಹೇರೂರು-ಅರೆಹೊಳೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಬೈಂದೂರು ಸುತ್ತಮುತ್ತ ಸುರಿದ ಭಾರಿ ಗಾಳಿಮಳೆಯಿಂದಾಗಿ ಬಿದ್ದಿದ್ದ ವಿದ್ಯುತ್ ತಂತಿಗಳ ದುರಸ್ತಿ ವೇಳೆ ಈ ಅನಾಹುತ ನಡೆದುಹೋಗಿದೆ.
ವಿದ್ಯುತ್ ತಂತಿಗಳನ್ನು ದುರಸ್ತಿ ಪಡಿಸುವ ಸಂದರ್ಭ ರಸ್ತೆಯಲ್ಲಿ ಯಾವುದೇ ಸೂಚನ ಫಲಕಗಳನ್ನು ಅಳವಡಿಸದೆ ಗುತ್ತಿಗೆದಾರ ಕಾಮಗಾರಿ ನಡೆಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ದುರಸ್ತಿ ನಡೆಯುತ್ತಿದ್ದ ವೇಳೆ ವಿದ್ಯುತ್ ತಂತಿ ಆಳೆತ್ತರದಲ್ಲಿ ನೇತಾಡುತ್ತಿದ್ದು, ಆಗ ಅದೇ ದಾರಿಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ಶೇಖರ್ ಶೆಟ್ಟಿ ಅವರ ಕೊರಳಿಗೆ ಉರುಳಿನಂತೆ ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಅವರು ಗೋಣು ಮುರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.