

ಬೆಂಗಳೂರು: ಸದ್ಯಕ್ಕೆ ಕೋವಿಡ್-19 ಪಾಸಿಟಿವ್ ಎನಿಸಿಕೊಳ್ಳುವುದೇ ದೊಡ್ಡ ನೆಗೆಟಿವ್. ಆದರೆ ಈ ನೆಗೆಟಿವ್ನಲ್ಲೂ ಒಂದು ಪಾಸಿಟಿವ್ ಕಂಡುಬಂದಿದೆ. ಅದೇನೆಂದರೆ ಕರೊನಾ ಕೇಸ್ ಹೆಚ್ಚಳವಾಗುತ್ತಿದ್ದಂತೆ ಹಾಗೂ ಆ ಸಂಬಂಧ ವಿಧಿಸಲಾಗಿರುವ ನೈಟ್ ಕರ್ಫ್ಯೂ ಮತ್ತು ಲಾಕ್ಡೌನ್ನಿಂದಾಗಿ ಅಪರಾಧ ಪ್ರಕರಣಗಳು ತಗ್ಗಿವೆ.
ರಾಜಧಾನಿ ಬೆಂಗಳೂರಿನಲ್ಲಿನ ಕಳೆದ ಕೆಲವು ತಿಂಗಳ ಅದರಲ್ಲೂ ಮಾರ್ಚ್-ಏಪ್ರಿಲ್-ಮೇನಲ್ಲಿನ ಅಪರಾಧ ಪ್ರಕರಣಗಳ ಅಂಕಿ-ಅಂಶಗಳ ಪ್ರಕಾರ ಮಹಾನಗರದಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆ ಆಗಿರುವುದು ಕಂಡುಬಂದಿದೆ. ಕರೊನಾ ಭೀತಿ ನಡುವೆ ಸದ್ಯಕ್ಕೆ ಅಪರಾಧ ಪ್ರಕರಣಗಳಂತೂ ತಗ್ಗಿವೆ.
ಇದೇ ವರ್ಷ ಫೆಬ್ರವರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದ ಅಪರಾಧ ಪ್ರಕರಣಗಳು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮೂರು ಪಟ್ಟು ಕಡಿಮೆ ಆಗಿವೆ. ಮಾರ್ಚ್ನಲ್ಲಿ 3,358, ಏಪ್ರಿಲ್ನಲ್ಲಿ 2,208 ಪ್ರಕರಣಗಳು ದಾಖಲಾಗಿವೆ. ಇದು ಜನವರಿ-ಫೆಬ್ರವರಿ ತಿಂಗಳಲ್ಲಿ ವರದಿಯಾಗಿದ್ದ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ ಮೂರು ಪಟ್ಟು ಕಡಿಮೆ. ಅದರಲ್ಲೂ ಈ ತಿಂಗಳ ಕಳೆದ 13 ದಿನಗಳಲ್ಲಿ ದಾಖಲಾಗಿರುವುದು ಬರೀ 546 ಅಪರಾಧ ಪ್ರಕರಣಗಳು. ಆ ಪೈಕಿ ಸೈಬರ್ ಕ್ರೈಮ್ಗೆ ಸಂಬಂಧಿತ ಪ್ರಕರಣಗಳೇ ಅಧಿಕ. ಜನವರಿ-ಫೆಬ್ರವರಿಯಲ್ಲಿ ಮಾಸಿಕ 5 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಜನವರಿಯಲ್ಲಿ 6,526, ಫೆಬ್ರವರಿ ತಿಂಗಳಲ್ಲಿ 5,642 ಅಪರಾಧ ಪ್ರಕರಣಗಳು ದಾಖಲಾಗಿವೆ.
ಇನ್ನು ಈಗ ತಗ್ಗಿರುವ ಅಪರಾಧ ಪ್ರಕರಣಳಲ್ಲಿ ಅರ್ಧಕ್ಕರ್ಧ ಪ್ರಕರಣಗಳು ಆನ್ಲೈನ್ ಮೂಲಕ ನಡೆದಂತಹ ವಂಚನೆಗಳು. ಹೀಗಾಗಿ ದಾಖಲಾಗಿರುವ ಅಪರಾಧ ಪ್ರಕರಣಗಳಲ್ಲಿ ಕೊಲೆ, ದರೋಡೆ, ಕಳ್ಳತನ, ಸರಗಳ್ಳತನ, ರಾಬರಿ, ಮನೆಗಳ್ಳತನ ಕೇಸ್ಗಳ ಸಂಖ್ಯೆ ತೀರಾ ಕಡಿಮೆ ಇವೆ.