

ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವ ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಸುಮಾರು 65 ಲಕ್ಷ ಮತದಾರರ ವಿವರಗಳನ್ನು ಆಗಸ್ಟ್ 9ರೊಳಗೆ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಡಿಲೀಟ್ ಆದ ಮತದಾರರ ವಿವರಗಳನ್ನು ಒದಗಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
supreme-court : ಬಿಹಾರದಲ್ಲಿ ವಿಶೇಷ ಚುನಾವಣಾ ಪರಿಷ್ಕರಣೆ (SIR) ವಿಷಯದ ಕುರಿತು ಸಂಸತ್ತಿನ ಎರಡೂ ಸದನಗಳಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಮತದಾರರ ಪಟ್ಟಿಯಿಂದ ಅಳಿಸಿಹಾಕಿದ 65 ಲಕ್ಷ ಹೆಸರುಗಳ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಇಂದು (ಆ.06) ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಇದು ಕೇವಲ ಕರಡು ಪಟ್ಟಿಯಾಗಿರುವುದರಿಂದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿ ಹಾಕಿರುವುದಕ್ಕೆ ಕಾರಣವೇನು ಎಂಬುದನ್ನು ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ತಿಳಿಸಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಅಳಿಸಿ ಹಾಕಿರುವ ಮತದಾರರ ಪಟ್ಟಿಯನ್ನು ನೀಡಲಾಗಿದೆ. ಆದರೆ ಸದರಿ ಮತದಾರ ಸತ್ತಿದ್ದಾನೊ ಅಥವಾ ವಲಸೆ ಹೋಗಿದ್ದಾನೊ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ ಎಂದು ಎಡಿಆರ್ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ನಿರ್ದೇಶನ ನೀಡಿದ ಚುನಾವಣಾ ಆಯೋಗದ ಜೂನ್ 24 ರ ಆದೇಶವನ್ನು ಪ್ರಶ್ನಿಸಿರುವ NGO, ಸುಮಾರು 65 ಲಕ್ಷ ಅಳಿಸಲಾದ ಮತದಾರರ ಹೆಸರುಗಳನ್ನು ಪ್ರಕಟಿಸಲು ಚುನಾವಣಾ ಸಮಿತಿಗೆ ನಿರ್ದೇಶನ ನೀಡುವಂತೆ ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದೆ. ಜೊತೆಗೆ ಅವರು ಸತ್ತಿದ್ದಾರೆಯೇ, ಶಾಶ್ವತವಾಗಿ ವಲಸೆ ಹೋಗಿದ್ದಾರೆಯೇ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಪರಿಗಣಿಸಲಾಗಿಲ್ಲವೇ ಎಂಬುದನ್ನು ತಿಳಿಸುವಂತೆ ಉಲ್ಲೇಖಿಸಲಾಗಿದೆ. NGO ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಪೀಠವು, ಇದಕ್ಕೆ ಕಾರಣವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದೆ.
(ಏಜೆನ್ಸೀಸ್)