

aishani-shetty | ಸ್ಯಾಂಡಲ್‌ವುಡ್ ಶಾಕುಂತಲೆ ಎಂದೇ ಖ್ಯಾತಿ ಪಡೆದಿರುವ ಐಶಾನಿ ಶೆಟ್ಟಿ ಇದೀಗ ನಟನೆಯಿಂದ ನಿರ್ದೇಶನ ಹಾಗೂ ನಿರ್ಮಾಣದತ್ತ ಹೆಜ್ಜೆ ಇಡುತ್ತಿದ್ದಾರೆ. ತಾವೇ ಬರೆದ ಕಥೆಯನ್ನು ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಾದ 'ಶಾಕುಂತಲೆ ಸಿನಿಮಾಸ್' ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಹೊತ್ತು ತರಲು ಸಜ್ಜಾಗಿದ್ದಾರೆ. ಈ ಮೂಲಕ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ತಾವೇ ಸ್ವತಃ ಶಾಕುಂತಲೆ ಸಿನಿಮಾಸ್ ಎಂಬ ನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿದ್ದು, ಆ ಮೂಲಕ ತನ್ನ ನಿದೇಶನದಲ್ಲಿ ಸಿನಿಮಾವನ್ನು ತೆರೆ ಮೇಲೆ ಹೊತ್ತು ತರುವ ಜವಾಬ್ದಾರಿ ಹೊಂದಿದ್ದೇನೆ ಎಂದು ನಟಿ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಸ್ತು ಪ್ರಕಾರ ಸಿನಿಮಾದ ಮೂಲಕ ಪರಿಚಿತರಾದ ಐಶಾನಿ, ಪ್ಲಸ್, ರಾಕೆಟ್, ನಡುವೆ-ಅಂತರವಿರಲಿ, ನಮ್ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಐಶಾನಿ ಶೆಟ್ಟಿಗೆ ಬಹುದಿನಗಳಿಂದ ನಿರ್ದೇಶಕಿ ಆಗಬೇಕು ಎಂಬ ಕನಸಿತ್ತು. ಈಗ ಆ ಕನಸನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.
ಎಲ್ಲರಿಗೂ ನಮಸ್ಕಾರ, ಒಂದೊಳ್ಳೆ ಸುದ್ದಿ ನಿಮ್ಮ ಜೊತೆ ಹಂಚಿಕೊಳ್ಳುವ ಸಮಯ ಬಂದಿದೆ. ಖುಷಿ ಮತ್ತು ಸ್ವಲ್ಪ ಭಯ ಎರಡು ಒಟ್ಟೊಟಿಗೆ ಆಗುತ್ತಿದೆ. ನಾನು ಹೊಸ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದೇನೆ.
ನನ್ನ ಜೀವನದಲ್ಲಿ ಸಿನಿಮಾ ಯಾವಾಗಲೂ ವಿಶೇಷವಾದ ಜಾಗವನ್ನು ಪಡೆದಿದೆ. ಕಥೆ ಹೇಳುವುದು ನನ್ನ ಇಷ್ಟದ ಕೆಲಸ. ಸದ್ಯ ನಾನೀಗ ಸಿನಿಮಾವೊಂದನ್ನು ನಿರ್ದೇಶನ ಮಾಡುವ ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ. ಈ ಕಥೆಯ ಜೊತೆ ಕೆಲಸ ಮಾಡುತ್ತಾ ನನಗೆ ತಿಳಿಯದೆ ಹೊಸ ಪ್ರಪಂಚಕ್ಕೆ ಪ್ರಯಾಣ ಮಾಡಿದೆ. ಯಾಕೋ ನನಗೆ ಈ ಕಥೆಯನ್ನ ನಾನೇ ನಿರ್ಮಾಣ ಮಾಡುವ ಆಲೋಚನೆ ಬಂತು. ತುಂಬಾ ಯೋಚಿಸಿದ ನಂತರ ಈ ಚಿತ್ರವನ್ನ ನಮ್ಮದೇ ಸ್ವಂತ ಸಂಸ್ಥೆಯಲ್ಲಿ ಮಾಡಲು ನಿರ್ಧರಿಸಿದೆ.
ಶಾಕುಂತಲೆ, ನನಗೆ ನೀವೇ ಕೊಟ್ಟ ಹೆಸರು. ನಾನು ಎಲ್ಲೆ ಹೋದರು 'ಶಾಕುಂತಲೆ ಸಿಕ್ಕಳು' ಹಾಡು ಬಿಡುಗಡೆ ಆದಾಗಿನಿಂದಲೂ ನನ್ನನ್ನು ಪ್ರೀತಿಯಿಂದ ನೀವು ಶಾಕುಂತಲೆ ಎಂದು ಕರೆಯುವುದು ನನಗೆ ತುಂಬಾ ಸಂತೋಷ ನೀವು ಕೊಟ್ಟ ಗೌರವದ ಸಲುವಾಗಿ ಅದೇ ಹೆಸರನ್ನು ನನ್ನ ನಿರ್ಮಾಣ ಸಂಸ್ಥೆಗೆ ಇಡುವ ಮುಖಾಂತರ ನಿಮ್ಮನ್ನು ಪ್ರತಿಯಾಗಿ ಗೌರವಿಸುತ್ತಿದ್ದೇನೆ. ಹೊಸ ಪ್ರಯಾಣ, ಹೊಸ ಆರಂಭ, ಹೊಸ ಜವಾಬ್ದಾರಿ ಇದನ್ನು ಗಟ್ಟಿಯಾಗಿ ನಿಂತು ಹೊರುವ ಪಣ ತೊಟ್ಟಿದ್ದೇನೆ. ನಿಮ್ಮೆಲ್ಲರ ಸಹೃದಯ ಹಾರೈಕೆಗಳು ಎಂದಿನಂತೆ ನನ್ನ ಜೊತೆಗಿರಲಿ. ಅದೇ ನನ್ನ ಶಕ್ತಿ. ಥ್ಯಾಂಕ್ ಯು ಆಲ್ ಪ್ರೀತಿಯಿಂದ, ನಿಮ್ಮ ಐಶಾನಿ ಶಾಕುಂತಲೆ ಸಿನಿಮಾಸ್ ಎಂದು ಪೋಸ್ಟ್ ಮಾಡಿದ್ದಾರೆ.