ನಾಲ್ಕು ರಾಜ್ಯಗಳಲ್ಲಿ ಆರು ಮಹಿಳೆಯರನ್ನು ಮದುವೆಯಾಗಿದ್ದ ಕಿರಾತಕ ಸಿಕ್ಕಿಬಿದ್ದಿದ್ದೇ ರೋಚಕ!

Bihar Man
Published on

ನವದೆಹಲಿ: ನಾಲ್ಕು ರಾಜ್ಯಗಳಲ್ಲಿ ಒಟ್ಟು ಆರು ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದ ಬಿಹಾರದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಒಬ್ಬ ಮಹಿಳೆಯ ಸೋದರನೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

ಜಮುಯಿ ರೈಲ್ವೆ ನಿಲ್ದಾಣದಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಈತನನ್ನು ನೋಡಿದ್ದ ಆರು ಪತ್ನಿಯರ ಪೈಕಿ ಒಬ್ಬಳ ಸೋದರ ಸಮಯಪ್ರಜ್ಞೆ ಮೆರೆದು ಆರೋಪಿಯನ್ನು ಸೆರೆಮನೆಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ತನ್ನ ಹೆಸರು ಛೋಟು ಕುಮಾರ್​ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ತನಗೆ ಮೊದಲ ಪತ್ನಿಯಿಂದ ನಾಲ್ಕು ಮಕ್ಕಳು, ಒಂದೂವರೆ ವರ್ಷದ ಹಿಂದೆ ಬಿಟ್ಟು ಹೋಗಿರುವ ಇನ್ನೊಬ್ಬ ಸ್ತ್ರೀಯಿಂದ ಇಬ್ಬರು ಮಕ್ಕಳಿದ್ದಾರೆ ಎಂದು ಛೋಟು ವಿವರಿಸಿದ್ದಾನೆ.

ಬಿಹಾರದ ಜವಾತರಿ ಎಂಬ ಗ್ರಾಮದ ನಿವಾಸಿ ಛೋಟು, ಸೋಮವಾರ ಸಂಜೆ ಜಮುಯಿ ರೈಲ್ವೆ ಸ್ಟೇಷನ್​ನಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಇದ್ದುದ್ದನ್ನು ಇನ್ನೊಬ್ಬ ಪತ್ನಿ ಮಂಜು ಎಂಬಾಕೆಯ ಸೋದರ ವಿಕಾಸ್​ ಎಂಬಾತ ಗಮನಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದಾಗ ಛೋಟು ಬಣ್ಣ ಬಯಲಾಗಿದೆ.

ಛೋಟು ನಮಗೆ ಮೋಸ ಮಾಡಿದ್ದಾನೆ ಎಂದು ಮಂಜು ತಾಯಿ ಕೊಬಿಯಾ ದೇವಿ ಹೇಳಿದ್ದಾಳೆ. 2018 ರಲ್ಲಿ ತನ್ನ ಮಗಳನ್ನು ಛೋಟು ವಿವಾಹವಾದನು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಛೋಟು ಔಷಧಿ ತರುವ ನೆಪದಲ್ಲಿ ಮನೆ ಬಿಟ್ಟು ಹೋಗಿದ್ದ ಆದರೆ, ಅಂದಿನಿಂದ ಆತ ಮರಳಿ ಬಂದಿರಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಂಜು ಸಹೋದರ ವಿಕಾಸ್​ ಮಾತನಾಡಿ, ಬಹಳ ವರ್ಷಗಳಿಂದ ತನ್ನ ಸಹೋದರಿ ಈತನಿಗಾಗಿ ಕಾಯುತ್ತಿದ್ದಾಳೆ. ಆದರೆ, ಈತ ಮಾತ್ರ ಬೇರೆ ಮಹಿಳೆಯನ್ನು ನನ್ನ ಪತ್ನಿ ಎಂದು ಹೇಳುತ್ತಿದ್ದಾನೆ ಎಂದು ದೂರಿದ್ದಾರೆ.

ದಿಯೋಘರ್​ನಲ್ಲಿರುವ ಮಾ ಶಾರದಾ ಆರ್ಕೆಸ್ಟ್ರಾದಲ್ಲಿ ಛೋಟು ಗಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಚೈನಾವಾರಿಯಾ, ಸುಂದರಕಾಂಡ್, ರಾಂಚಿ, ಸಂಗ್ರಾಮ್‌ಪುರ, ದೆಹಲಿ ಮತ್ತು ದಿಯೋಘರ್‌ನ ಮಹಿಳೆಯರನ್ನು ವಿವಾಹವಾಗಿರುವ ಛೋಟು ಎಲ್ಲರೊಂದಿಗೆ ಮಕ್ಕಳನ್ನು ಹೊಂದಿದ್ದಾನೆ.

ಆರ್ಕೆಸ್ಟ್ರಾ ಕಾರ್ಯಕ್ರಮ ನೀಡಲು ಹೋದಲ್ಲೆಲ್ಲಾ ಹಾಡಿನ ಮೂಲಕ ಇತರರನ್ನು ರಂಜಿಸುತ್ತಿದ್ದ. ಅಲ್ಲದೆ, ಮಹಿಳೆಯರನ್ನು ತನ್ನ ಹಾಡಿನ ಮೂಲಕ ಮೋಹದ ಬಲೆಯಲ್ಲಿ ಬೀಳಿಸಿ, ಮದುವೆ ಮಾಡಿಕೊಳ್ಳುತ್ತಿದ್ದ ಎಂದು ವಿಕಾಸ್ ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net