ಪ್ರಧಾನಿ ಮೋದಿ ತಾಯಿಯನ್ನು ಅಣುಕಿಸುವ ಪೋಸ್ಟ್​ ಹಂಚಿಕೊಂಡ ಬಿಹಾರ ಕಾಂಗ್ರೆಸ್​: ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ | Bihar

untitled-design-2025-09-12t132011305-68c3d0d119419
Published on

Bihar : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿ ಹೀರಾಬೆನ್​​ ಮೋದಿಯನ್ನು ಹೋಲುವಂತಹ ಪಾತ್ರಗಳನ್ನು ಕೃತಕ ಬುದ್ಧಿಮತ್ತೆ ಆಧಾರದಲ್ಲಿ ಸೃಷ್ಟಿಸಿ ಅವರ ಕನಸಿನಲ್ಲಿ ತಾಯಿ ಹೀರಾಬೆನ್​ ಮಾತನಾಡುತ್ತಿರುವಂತಹ ದೃಶ್ಯವನ್ನು ಬಿಹಾರ ಕಾಂಗ್ರೆಸ್​​ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್​ ಮಾಡಿದ ನಂತರ, ಈ ವಿಡಿಯೋ ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ವಿಡಿಯೋ 36 ಸೆಕೆಂಡ್​ಗಳ ಕ್ಲಿಪ್​ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಚುನಾವಣೆಯ ಮುಂಚಿತವಾಗಿ ಈ ರೀತಿ ಮಾಡುತ್ತಿರುವುದು ವೈಯಕ್ತಿಕ ದಾಳಿ ಎಂದು ಬಿಜೆಪಿ ಆರೋಪಿಸಿದೆ.

"ಸಾಹೇಬರ ಕನಸಿನಲ್ಲಿ ತಾಯಿ ಕಾಣಿಸಿಕೊಳ್ಳುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್​​ ವಿಡಿಯೋವನ್ನು ಜಾಲತಾಣಗಳಲ್ಲಿ ಹರಡಿತ್ತು. ಇದು ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ನಡುವೆಯೇ ಈ ವಿಡಿಯೋ ಬಂದಿದ್ದು, ಮೋದಿಯವರ ಭಾವನೆಗೆಳಿಗೆ ನೋವುಂಟು ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಇವರು ಕ್ಷಮೆಯಾಚಿಸಬೇಕು ಹಾಗೇ ಇದಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಈ ವಿಡಿಯೋ ಖಂಡಿಸಿ, ಬಿಜೆಪಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಮಾತನಾಡಿದ್ದು, ಪ್ರಧಾನಿ ಯಾವಾಗಲೂ ರಾಜಕೀಯ ಮತ್ತು ಕುಟುಂಬವನ್ನು ಪ್ರತ್ಯೇಕವಾಗಿ ಇಟ್ಟಿದ್ದಾರೆ. ಕಾಂಗ್ರೆಸ್​ ಪ್ರಧಾನಿ ಮೋದಿಯವರ ತಾಯಿಯನ್ನು ಮೊದಲು ಅವಮಾನಿಸಿದ್ದು, ಈಗ ಡೀಪ್​ಫೇಕ್​ ತಂತ್ರವನ್ನು ಬಳಸಿಕೊಂಡು ದೇಶವನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದೆ. ಇದು ಎಲ್ಲಾ ತಾಯಂದಿರನ್ನು ಅವಮಾನಿಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಪಕ್ಷವು ಎಲ್ಲಾ ಮಿತಿಗಳನ್ನು ಮೀರುತ್ತಿದೆ. ಪ್ರಧಾನಿಯವರ ತಾಯಿಯನ್ನು ನಿಂದಿಸಿದಕ್ಕೆ ಪಶ್ಚತ್ತಾಪ ಪಡುವ ಬದಲು, ಆರೋಪಿಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ಪಕ್ಷವು ಗಾಂಧಿವಾದಿಯ ಬದಲು "ಗಾಳಿವಾಡಿ"ಯಾಗಿದೆ. ಇದು ಅವರಿಗೆ ನಾಚೀಕೆಗೀಡಿನ ಸಂಗತಿ ಎಂದು ಪೋಸ್ಟ್​ ಮಾಡಿದ್ದಾರೆ.

ಹೀರಾಬೆನ್​ ಮೋದಿಯವರ ಹೆಸರನ್ನು ರಾಜಕೀಯ ವಿವಾದಕ್ಕೆ ಸಿಲುಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆಗಸ್ಟ್​ 27 ರಂದು ಧರ್ಬಾಂಗದಲ್ಲಿ ಕಾಂಗ್ರೆಸ್​ ಮತ್ತು ಆರ್​ಜೆಡಿ ನೇತೃತ್ವದ 'ಮತದಾರರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ, ಪ್ರಧಾನಿ ಹಾಗೂ ಅವರ ತಾಯಿಯ ವಿರುದ್ಧ ನಿಂದನೀಯ ಘೋಷಣೆಗಳನ್ನು ವೇದಿಕೆಯಿಂದ ಕೂಗಿರುವ ಪ್ರಕರಣ ದಾಖಲಾಗಿತ್ತು.

ಇದಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿಯವರು, ಈ ಘಟನೆಯು ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಆ ಘಟನೆಯಾದ ಬಳಿಕ, ಪೋಸ್ಟ್​ ವಿರುದ್ಧ ಬಿಹಾರದಲ್ಲಿ ಎನ್‌ಡಿಎಯ ಮಹಿಳಾ ಘಟಕವು 5 ಗಂಟೆಗಳ ಬಂದ್‌ಗೆ ಕರೆ ನೀಡಿತು. ಇನ್ನು ಈ ಹೇಳಿಕೆಗಳು ರಾಜ್ಯಾದ್ಯಂತ ಮಹಿಳೆಯರ ಘನತೆಗೆ ಮಾಡಿದ ಅವಮಾನ ಮಾಡಿದೆ ಎಂದು ಉಲ್ಲೇಖಸಿದೆ. ಈ ಕೂಡಲೇ ಕಾಂಗ್ರೆಸ್​ನವರು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net