

ಬೆಂಗಳೂರು: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ಯಾವುದೇ ಪುರಾವೆ ಇಲ್ಲ. ದುರುದ್ದೇಶದಿಂದ ನನ್ನನ್ನು ಅರೆಸ್ಟ್ ಮಾಡಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಬಳಿ ಬಳಿ ಅವರು ಮೊದಲ ಪ್ರತಿಕ್ರಿಯೆ ನೀಡಿದರು. ನನ್ನ ವಿರುದ್ಧ ರಾಜಕೀಯವಾಗಿ ದೊಡ್ಡ ಷಡ್ಯಂತ್ರ ನಡೆಸಿದ್ದಾರೆ.
ಯಾವುದೇ ಪುರಾವೆಗಳು ಇಲ್ಲದೇ ಕೇವಲ ದುರುದ್ದೇಶದಿಂದ ಅರೆಸ್ಟ್ ಮಾಡಿಸಿದ್ದಾರೆ. ನನ್ನ ವಿರುದ್ಧ ರಾಜಕೀಯ ಇತಿಹಾಸದಲ್ಲೇ ದೊಡ್ಡ ಷಡ್ಯಂತರ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದ ರೇವಣ್ಣ ಈ ವೇಳೆ ಸಿಐಡಿ ವಿಶೇಷ ತನಿಖಾ (ಎಸ್ಐಟಿ) ತಂಡದ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಯಾವುದೇ ಕಪ್ಪುಚುಕ್ಕೆ ಇಲ್ಲ. ಆಮೇಲೆ 2ನೇ ತಾರೀಖು ನಡೆಸಿದ ತನಿಖೆಯಲ್ಲಿ ಯಾವುದೇ ಪುರಾವೆಗಳು ಸಿಕ್ಕಿಲ್ಲ. ನನ್ನ ವಿರುದ್ಧ ಷಡ್ಯಂತರ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದನ್ನು ಎದುರಿಸುವ ಶಕ್ತಿ ನನ್ನಲ್ಲಿದೆ. ಎಲ್ಲವನ್ನೂ ಆಮೇಲೆ ಹೇಳುತ್ತೇನೆ ಎಂದು ಎಂದು ರೇವಣ್ಣ ಅವರು ಹೇಳಿದರು.
ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರನ್ನು ಬೆಂಗಳೂರು ಪದ್ಮನಾಭನದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸದಲ್ಲಿ ಶನಿವಾರ ಸಂಜೆ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.