

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಶುರುವಾಗಿ 14 ವಾರಗಳು ಕಳೆದಿದ್ದು, ದಿನ ಕಳೆದಂತೆ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೂ ಫಿನಾಲೆ ನಡೆಯುವುದಕ್ಕೆ ಮೂರು ವಾರಗಳು ಉಳಿದಿದ್ದು, ಕಾರ್ಯಕ್ರಮ ಮತ್ತಷ್ಟು ರೋಚಕತೆ ಹೆಚ್ಚಿಸಿಕೊಂಡಿದೆ. ಇನ್ನೂ ಶನಿವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದ ನಿರೂಪಕ ಕಿಚ್ಚ ಸುದೀಪ್ ಭಾನುವಾರದ ಸಂಚಿಕೆಯಲ್ಲೂ ಮನೆಯ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇಂದಿನ ಪ್ರೋಮೋ ನೋಡಿದರೆ ಮನರಂಜನೆ ಫಿಕ್ಸ್ ಎಂದು ಹೇಳಲಾಗಿದೆ.
ಬಾದ್ಷಾ ಸುದೀಪ ಜೊತೆ ಸೂಪರ್ ಸಂಡೇ ಸ್ಪೆಷಲ್ ಟಾಕ್ ಎಂಬ ಅಡಿಬರಹದೊಂದಿಗೆ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ಸುದೀಪ್ ಬಿಗ್ಬಾಸ್ (BiggBoss) ಮನೆಯಲ್ಲಿರುವ ಸ್ಫರ್ಧಿಗಳಿಗೆ ಹೊರಗೆ ತಮ್ಮನ್ನು ಟ್ರೋಲ್ ಮಾಡುತ್ತಿರುವ ವಿಚಾರವನ್ನು ಗಮನಕ್ಕೆ ತರುತ್ತಾರೆ. ಇದರಲ್ಲಿ ಪ್ರಮುಖವಾಗಿ ಚೈತ್ರಾ ಕುಂದಾಪುರ, ಹನುಮಂತು ಹಾಗು ಧನರಾಜ್ ಅವರ ಟ್ರೋಲ್ಗಳನ್ನು ತೋರಿಸಲಾಗುತ್ತದೆ. ಹನುಮಂತು ಹಾಗೂ ಧನರಾಜ್ಗೆ ಸಂಬಂಧಿಸಿದ ಟ್ರೋಲ್ಗಳು ಮನೆಯವರ ಗಮನ ಸೆಳೆದಿದೆ.
ಫ್ಯಾಮಿಲಿ ವೀಕ್ನಲ್ಲಿ ಗೌತಮಿ ಅವರ ಪತಿ ಬಿಗ್ಬಾಸ್ (BiggBoss) ಮನೆಗೆ ಬಂದಿದ್ದರು. ಈ ವೇಳೆ ದಂಪತಿಗಳು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ದಂಪತಿಗಳು ಒಟ್ಟಿಗೆ ಇರುವುದನ್ನು ಹನುಮಂತು ಹಾಗೂ ಧನರಾಜ್ ಕದ್ದು ನೋಡಿ ಮಾತನಾಡಿಕೊಂಡಿರುವುದನ್ನು ಟ್ರೋಲ್ ಮಾಡಲಾಗಿದ್ದು, ಈ ಬಗ್ಗೆ ನಿರೂಪಕ ಕಿಚ್ಚ ಸುದೀಪ್ಕೇಳಿದಾಗ ಧನರಾಜ್ ನೀಡಿರುವ ಉತ್ತರ ಮನೆಮಂದಿಯನ್ನು ನಗೆಗಡಲಲ್ಲಿ ತೇಲಿಸಿದೆ. ಈ ಪ್ರೋಮೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ತಮ್ಮಿಷ್ಟದ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.