ಸಿಎಂ ಹೇಮಂತ್​ ಸೊರೆನ್​​​ ಜಾಮೀನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​​​​

Untitled-design-2024-07-29T134500.643
Published on

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​​ಗೆ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ (ಜುಲೈ 29) ತಿರಸ್ಕರಿಸಿದೆ. ಜೂನ್ 28ರಂದು ಜಾರ್ಖಂಡ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಉತ್ತಮ ತಾರ್ಕಿಕ ಆದೇಶ ಎಂದು ಹೇಳಿದೆ.

ಜಾಮೀನು ನೀಡಿರುವ ಹೈಕೋರ್ಟ್‌ನ ಆದೇಶವು ನ್ಯಾಯಯುತ ಮತ್ತು ಸಮತೋಲಿತವಾಗಿದೆ ಎಂದು ತೋರುತ್ತಿದೆ ಎಂದು ನ್ಯಾಯಮೂರ್ತಿ ಬಿ.ಆರ್​​​.ಗವಾಯಿ ನೇತೃತ್ವದ ಪೀಠವು ಮೌಖಿಕವಾಗಿ ಹೇಳಿದೆ. ಆದ್ದರಿಂದ ಜಾರ್ಖಂಡ್​​ ಹೈಕೋರ್ಟ್​​​ ಆದೇಶದಲ್ಲಿ ಮಧ್ಯಪ್ರವೇಶಿಸಲು ನಾವು ಒಲವು ತೋರುವುದಿಲ್ಲ. ವಿಚಾರಣೆಯ ಸಮಯದಲ್ಲಿ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಮಾಡಿದ ಹೇಳಿಕೆಗಳು ವಿಚಾರಣಾ ನ್ಯಾಯಾಲಯದ ಮೇಲೆ ಪರಿಣಾಮ ಬೀರಬಾರದು ಎಂದು ಪೀಠವು ತಿಳಿಸಿದೆ.

ಜಾರ್ಖಂಡ್ ಹೈಕೋರ್ಟ್ ಹೇಮಂತ್ ಸೊರೆನ್ ಅವರಿಗೆ ಜಾಮೀನು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜೂನ್ 28ರಂದು ಹೈಕೋರ್ಟ್‌ನಿಂದ ಜಾಮೀನು ಪಡೆದರು. ಜೂನ್ 13ರಂದು ಸೊರೆನ್ ಅವರ ಜಾಮೀನು ಅರ್ಜಿಯ ಬಗ್ಗೆ ಹೈಕೋರ್ಟ್ ತನ್ನ ನಿರ್ಧಾರವನ್ನು ಕಾಯ್ದಿರಿಸಿತ್ತು.

ಪ್ರಕರಣದಲ್ಲಿ ಜನವರಿ 31ರಂದು ಇಡಿ ಅವರನ್ನು ಬಂಧಿಸುವ ಮುನ್ನವೇ ಹೇಮಂತ್ ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಜುಲೈ 4ರಂದು ಜಾರ್ಖಂಡ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net