MUDA scam : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ಮುಡಾ ಹಗರಣದ ತನಿಖೆಯನ್ನು ಸಿಬಿಐ ವಹಿಸಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಫೆ.07) ವಜಾಗೊಳಿಸಿದೆ.
ಲೋಕಾಯುಕ್ತ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ, ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸ್ನೇಹಮಯಿ ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದರು. ಜನವರಿ 27ರಂದು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ, ವಾದ-ಪ್ರತಿವಾದಗಳನ್ನು ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಹೈಕೋರ್ಟ್, ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದೆ. ಲೋಕಾಯುಕ್ತ ಕೂಡ ಒಂದು ಸ್ವತಂತ್ರ ತನಿಖಾ ಸಂಸ್ಥೆ ಎಂದು ಹೇಳಿದೆ.
ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಲೋಕಾಯುಕ್ತ ಕಚೇರಿಯ ಸ್ವಾತಂತ್ರ್ಯವು ಇಲ್ಲಿ ಪ್ರಶ್ನಾರ್ಹವಲ್ಲ. ಲೋಕಾಯುಕ್ತವನ್ನು ಬಾಹ್ಯ ಪ್ರಭಾವದಿಂದ ಹಾಗೂ ಸ್ವತಂತ್ರ ಸಂಸ್ಥೆ ಎಂಬುದನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಈಗಾಗಲೇ ಗುರುತಿಸಿದೆ. ಲೋಕಾಯುಕ್ತ ಬದಲಿಗೆ ಸಿಬಿಐ ತನಿಖೆಗೆ ನಿರ್ದೇಶಿಸಲು ಇಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಸಿಬಿಐ ತನಿಖೆಯು ಅರ್ಜಿಯಲ್ಲಿನ ಯೋಜಿತ ದುಷ್ಪರಿಣಾಮಗಳಿಗೆ ರಾಮಬಾಣವಲ್ಲ ಎಂದು ನ್ಯಾಯಾಲಯ ಹೇಳಿದೆ.
ತೀರ್ಪು ಬೆನ್ನಲ್ಲೇ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಲಕ್ಷ್ಮಣ ಕುಲಕರ್ಣಿ ಮಾತನಾಡಿ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಸೀನಿಯರ್‌ಗಳ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಏನಿದು ಮುಡಾ ಅಕ್ರಮ ಪ್ರಕರಣ: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮುಡಾ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಅನ್ನೋ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ದಾಖಲೆಗಳ ಜೊತೆ ಆರೋಪಿಸಿರುವ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ನೀಡಿ ಲಾಭ ಮಾಡಿಕೊಟ್ಟಿರುವುದು ನಿಜ. ಮೈಸೂರಿನ ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯಲ್ಲಿ 3.16 ಗಂಟೆ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನವನ್ನು ಸಿಎಂ ಪತ್ನಿಯ ಹೆಸರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.