ವಾರದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಿಡೆನ್! ಏನಾಗಿತ್ತು?

biden
Published on

ವಾಷಿಂಗ್ಟನ್​: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದ ಜೋ ಬಿಡೆನ್, ಕರೋನಾ ಸೋಂಕಿಗೆ ತುತ್ತಾಗಿದ್ದು, ಒಂದು ವಾರದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಪ್ರಸ್ತುತ ಚೇತರಿಸಿಕೊಂಡಿರುವ ಬಿಡೆನ್ ಶ್ವೇತಭವನಕ್ಕೆ ಭೇಟಿ ನೀಡಿದ್ದಾರೆ.

ಬಿನಾಕ್ಸ್ ರಾಪಿಡ್ ಆಂಟಿಜೆನ್ ಪರೀಕ್ಷೆ ಫಲಿತಾಂಶ ನಕಾರಾತ್ಮಕವಾಗಿದ್ದು, ಬಿಡೆನ್ ಅವರ ವೈದ್ಯರು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಿದ ಬಳಿಕ ಹೊರಗೆ ಕಾಣಿಸಿಕೊಂಡಿದ್ದಾರೆ.

ಬಿಡೆನ್ ಅವರಿಗೆ ಕಳೆದ ಬುಧವಾರ(ಜು.17) ಕರೋನಾ ಸೋಂಕು ಇರುವ ಲಕ್ಷಣಗಳು ಕಂಡುಬಂದಿದ್ದರಿಂದ ಅವರು ಡೆಲವೇರ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಅಲ್ಲಿ ಪ್ರತ್ಯೇಕವಾಗಿದ್ದರು. ಕ್ವಾರಂಟೈನ್‌ನಲ್ಲಿರುವಾಗಲೇ ಬಿಡೆನ್ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪ್ರಮುಖ ಘೋಷಿಸಿ ತಮ್ಮ ಪಕ್ಷ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುತ್ತದೆ ಎಂದು ಘೋಷಿಸಿದ್ದರು.

ಆದರೆ ಇದರ ಬೆನ್ನಲ್ಲೇ ಬಿಡೆನ್ ಅವರ ಆರೋಗ್ಯದ ಬಗ್ಗೆ ಗಂಭೀರ ವದಂತಿ ಹಬ್ಬಿತ್ತು. ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಚೇತರಿಸಿಕೊಳ್ಳುವುದು ಕಷ್ಟ ಎಂದು ವರದಿಗಳು ಬಂದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಇವು ಟ್ರೆಂಡ್ ಆಗಿದ್ದವು. ಆದರೆ ಇವೆಲ್ಲವೂ ವದಂತಿಗಳು ಎಂಬುದು ಇತ್ತೀಚೆಗೆ ಬಹಿರಂಗವಾಗಿದೆ.

ಕೋವಿಡ್‌ನಿಂದ ಚೇತರಿಸಿಕೊಂಡ ನಂತರ, ಬಿಡೆನ್ ಶ್ವೇತಭವನ ಸುದ್ದಿಗಾರರೊಂದಿಗೆ ಮಾತನಾಡಿದರು. ಹೇಗಿದ್ದೀರಿ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲವೂ ಚೆನ್ನಾಗಿದೆ ಎಂದು ಉತ್ತರಿಸಿದರು. ಅಧ್ಯಕ್ಷೀಯ ರೇಸ್‌ನಿಂದ ಏಕೆ ಹೊರಬಿದ್ದಿರಿ? ಟ್ರಂಪ್ ಸೋಲಿಸುವ ಸಾಮರ್ಥ್ಯ ಕಮಲಾ ಹ್ಯಾರಿಸ್‌ಗೆ ಇದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಿಸದೆ ಅವರು ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net