ಭೂ ಹಕ್ಕಿನ ಹೋರಾಟಕ್ಕೆ ‘ಭೂ ದಾನ’ ಸ್ಫೂರ್ತಿ: ಭೂಮಿ ಒಡೆತನದ ಕನಸು ಕಂಡಿದ್ದ ಡಾ.ರಾಜಕುಮಾರ್

blank

ಬೆಂಗಳೂರು : ಚಿತ್ರರಂಗ ಪ್ರಭಾವಿ ಮಾಧ್ಯಮವಾಗಿದ್ದು, ಚಳವಳಿಗಳೊಂದಿಗೂ ಹೆಜ್ಜೆ ಹಾಕಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಹಲವಾರು ಚಳವಳಿಗಳಿಗೆ ಭಾರತೀಯ ಚಿತ್ರರಂಗ ಸಾಥ್ ನೀಡಿದೆ. ಹಲವು ಚಳವಳಿ ಹಾಗೂ ಹೋರಾಟಗಳನ್ನು ತೆರೆ ಮೇಲೆ ತರಲಾಗಿದೆ. ಅದರಲ್ಲಿ ಸ್ವಾತಂತ್ರ್ಯ ನಂತರ ದೇಶದಲ್ಲಿ ಸಂಚಲನ ಮೂಡಿಸಿದ್ದ ಭೂ ದಾನ ಚಳವಳಿಯೂ ಒಂದು. ಆಚಾರ್ಯ ವಿನೋಭಾ ಭಾವೆ ಅವರು 1951ರಲ್ಲಿ ಆರಂಭಿಸಿದ್ದ ಭೂ ದಾನ ಆಂದೋಲನಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಅಗತ್ಯಕ್ಕಿಂತ ಹೆಚ್ಚು ಭೂಮಿ ಹೊಂದಿರುವರು ಭೂ ರಹಿತರಿಗೆ ಭೂಮಿ ದಾನ ಮಾಡುವಂತೆ ಮನವಿ ಮಾಡುವುದು ಈ ಆಂದೋಲನದ ಉದ್ದೇಶವಾಗಿತ್ತು. ಈ ಹೋರಾಟಕ್ಕೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೇ ಇದೇ ಆಂದೋಲನವನ್ನು ಮಾದರಿಯಾಗಿಟ್ಟುಕೊಂಡು 1962ರಲ್ಲಿ ‘ಭೂ ದಾನ’ ಸಿನಿಮಾ ಮೂಡಿಬಂದಿತ್ತು. ವಿನೋಭಾ ಬಾವೆ ಅವರ ಭೂ ದಾನ ಚಳವಳಿ ಹಾಗೂ ಶಿವರಾಮ್ ಕಾರಂತರ ‘ಚೋಮನ ದುಡಿ’ ಕಾದಂಬರಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ದೇಶಕ ಜಿ.ವಿ.ಅಯ್ಯರ್ ‘ಭೂ ದಾನ’ ಸಿನಿಮಾ ಮಾಡಿದ್ದರು. ಇಲ್ಲಿ ವರನಟ ಡಾ.ರಾಜಕುಮಾರ್ ಮುಖ್ಯಭೂಮಿಕೆಯಲ್ಲಿದ್ದು, ಸ್ವಂತ ಭೂಮಿಯಲ್ಲಿ ಬೆಳೆ ಬೆಳೆದು ಸುಂದರ ಬದುಕಿನ ಕನಸು ಕಾಣುವ ದಾಸಪ್ಪ ಪಾತ್ರ ನಿರ್ವಹಿಸಿದ್ದರು. ಅಣ್ಣಾವ್ರ ನಟಿಸಿದ 30ನೇ ಚಿತ್ರವಿದು. ತಳಸಮುದಾಯಗಳ ಬದುಕನ್ನು ತೆರೆ ಮೇಲೆ ತಂದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ.

blank

ಭೂ ಹಕ್ಕಿನ ಹೋರಾಟಕ್ಕೆ ‘ಭೂ ದಾನ’ ಸ್ಫೂರ್ತಿ: ಭೂಮಿ ಒಡೆತನದ ಕನಸು ಕಂಡಿದ್ದ ಡಾ.ರಾಜಕುಮಾರ್

ತಳಸಮುದಾಯ ಬದುಕಿನ ಕಥನ: ತಳಸಮುದಾಯದ ದಾಸಪ್ಪನಿಗೆ(ಡಾ.ರಾಜಕುಮಾರ್) ಒಂದು ಎಕರೆ ಸ್ವಂತ ಭೂಮಿಯಲ್ಲಿ ಉಳುವುದೇ ದೊಡ್ಡ ಕನಸು. ಅದಕ್ಕಾಗಿ ಊರಿನ ಜಮೀನ್ದಾರರಲ್ಲಿ ಎಕರೆ ಭೂಮಿ ಕೇಳುತ್ತಾನಾದರೂ, ಆತ ನಿರಾಕರಿಸುತ್ತಾನೆ. ಯಾವಾಗ ಹಳ್ಳಿಗೆ ಭೂ ದಾನ ಚಳವಳಿಕಾರರು ಆಗಮಿಸುತ್ತಾರೋ ದಾಸಪ್ಪನಿಗೆ ಐದು ಎಕರೆ ಭೂಮಿ ಸಿಗುವಂತಾಗುತ್ತದೆ. ಸ್ವಂತ ಕೃಷಿ ಭೂಮಿಯ ಕನಸು ನನಸಾದ ದಿನವನ್ನು ದಾಸಪ್ಪ ತನ್ನ ಮೂವರು ಮಕ್ಕಳು ಹಾಗೂ ಸಹೋದರನೊಂದಿಗೆ ಸಂಭ್ರಮಿಸುತ್ತಾನೆ. ಆದರೆ, ಹೋಗಿ ತನಗೆ ಸಿಕ್ಕ ಭೂಮಿ ನೋಡಿದರೆ, ಕಲ್ಲುಗಳಿಂದ ತುಂಬಿರುವ ಬಂಜರು ಭೂಮಿಯದು. ಆ ಸಮಯದಲ್ಲಿ ಮಕ್ಕಳು ಜಮೀನ್ದಾರರ ವಿರುದ್ಧ ಸಿಡಿದೇಳಲು ಹೋಗುತ್ತಾರೆ. ಸೌಮ್ಯ ಸ್ವಭಾವಿ ದಾಸಪ್ಪ, ಮಕ್ಕಳಿಗೆ ಬುದ್ಧಿ ಹೇಳಿ, ಅದೇ ಜಮೀನನ್ನು ಸರಿ ಮಾಡಿ ಉಳಲು ಆರಂಭಿಸುತ್ತಾನೆ. ಇದನ್ನು ಸಹಿಸಿಕೊಳ್ಳದ ಜಮೀನ್ದಾರ, ದಾಸಪ್ಪನಿಗೆ ಕೊಟ್ಟಿರುವ ಸಾಲದ ಮೇಲೆ ಜಮೀನನ್ನು ಮತ್ತೆ ಮರುವಶಕ್ಕೆ ಪಡೆದುಕೊಳ್ಳುತ್ತಾನೆ. ಇದರ ಬಳಿಕ ದಾಸಪ್ಪ ಪಡುವ ಯಾತನೆ, ಸಂಕಟಗಳು ಹಾಗೂ ಹಲವಾರು ರೀತಿಯ ಅವಮಾನಗಳೇ ಮುಂದಿನ ಕಥೆ. ಇಲ್ಲಿ ತಳಸಮುದಾಯಗಳ ಬದುಕಿನ ತಲ್ಲಣಗಳನ್ನು ನಿರೂಪಿಸಲಾಗಿದೆ.

ಭೂ ಹಕ್ಕಿನ ಹೋರಾಟಕ್ಕೆ ‘ಭೂ ದಾನ’ ಸ್ಫೂರ್ತಿ: ಭೂಮಿ ಒಡೆತನದ ಕನಸು ಕಂಡಿದ್ದ ಡಾ.ರಾಜಕುಮಾರ್

‘ಕುಮಾರ’ ತ್ರಯರ ಸಂಗಮ: ಕನ್ನಡ ಚಿತ್ರರಂಗದಲ್ಲಿ ‘ಕುಮಾರ ತ್ರಯರು’ ಎಂದೇ ಖ್ಯಾತರಾಗಿದ್ದ ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್ ಹಾಗೂ ಉದಯ ಕುಮಾರ್ ಮೂವರು ಒಟ್ಟಿಗೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ‘ಭೂ ದಾನ’. ಹಿಂದೆ ‘ಗಾಳಿ ಗೋಪುರ’ ಚಿತ್ರದಲ್ಲಿ ರಾಜಕುಮಾರ್ ಹಾಗೂ ಕಲ್ಯಾಣಕುಮಾರ್ ಮುಖ್ಯಭೂಮಿಕೆಯಲ್ಲಿದ್ದರೆ, ಉದಯ್ ಕುಮಾರ್ ಅತಿಥಿ ಪಾತ್ರ ನಿರ್ವಹಿಸಿದ್ದರು. ಆದರೆ, ಮೂವರು ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಇದೇ ಮೊದಲು. ರಾಜಕುಮಾರ್ ತಂದೆಯ ಪಾತ್ರ ನಿರ್ವಹಿಸಿದರೆ, ಮಕ್ಕಳ ಪಾತ್ರದಲ್ಲಿ ಕಲ್ಯಾಣ ಕುಮಾರ್, ಉದಯ ಕುಮಾರ್ ಹಾಗೂ ಲೀಲಾವತಿ ನಟಿಸಿದ್ದರು. ಜತೆಗೆ ಕೆ.ಎಸ್.ಅಶ್ವತ್ಥ, ಬಾಲಯ್ಯ, ನರಸಿಂಹರಾಜು ಜಿ.ವಿ.ಅಯ್ಯರ್ ಕಲಾಬಳಗದಲ್ಲಿದ್ದರು.

ಆಂದೋಲನಕ್ಕೆ ನಾಂದಿ: 1960ರ ದಶಕದಲ್ಲಿ ರಾಜ್ಯದಲ್ಲಿ ಭೂ ಹಕ್ಕಿನ ಹೋರಾಟ ಬಿರುಸುಗೊಂಡಿತ್ತು. ಅದೇ ಸಮಯದಲ್ಲಿ ‘ಭೂ ದಾನ’ ಚಿತ್ರ ತೆರೆಕಂಡು ಉಳ್ಳವರು, ಇಲ್ಲದವರಿಗೆ ಭೂಮಿ ದಾನ ಮಾಡಲು ಈ ಸಿನಿಮಾ ಪ್ರೇರಣೆ ನೀಡಿತ್ತು. ಜತೆಗೆ ಸರ್ವರಿಗೂ ಸಮಬಾಳು-ಸಮಪಾಲು ಹಾಗೂ ಧಾರ್ಮಿಕ ಸಾಮರಸ್ಯದ ಬಗ್ಗೆ ಅರಿವು ಮೂಡಿಸಿತ್ತು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank