ಪಿಂಕ್ ನೋಟ್ ಹಿಂದೆ ಭಾವನಾ; ಮೊದಲ ಬಾರಿಗೆ ದ್ವಿಪಾತ್ರಗಳಲ್ಲಿ ಅಭಿನಯ

Bhavana
Published on

ಬೆಂಗಳೂರು: ಕಳೆದ ವರ್ಷ ‘ಜಾಕಿ’ ಭಾವನಾ ಅಭಿನಯದ ನಾಲ್ಕು ಚಿತ್ರಗಳು ಬಿಡಗುಡೆ ಯಾಗಿದ್ದವು. ಆ ನಂತರ ಅವರು ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ. ಈಗ ಅವರು ‘ಪಿಂಕ್ ನೋಟ್’ ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಮೊದಲ ಬಾರಿಗೆ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಚಿತ್ರದ ಮುಹೂರ್ತವೂ ಆಗಿದ್ದು, ಮೊದಲ ದೃಶ್ಯಕ್ಕೆ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಪಿಂಕ್ ನೋಟ್’ ಎಂದರೆ ಎರಡು ಸಾವಿರ ರೂ.ಗಳ ನೋಟು. ದುಡ್ಡಿನ ಹಿಂದೆ ಬಿದ್ದರೆ ಆಗುವ ಸಮಸ್ಯೆಗಳನ್ನು ನಿರ್ದೇಶಕ ರಕ್ಷಣ್ ವಿವರಿಸುವುದಕ್ಕೆ ಹೊರಟ್ಟಿದ್ದಾರಂತೆ. ಈ ಹಿಂದೆ ದಿಗಂತ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಿದ್ದ ರುದ್ರೇಶ್, ಈಗ ರಕ್ಷಣ್ ಎಂದು ಹೆಸರು ಬದಲಾಯಿಸಿಕೊಂಡು ‘ಪಿಂಕ್ ನೋಟ್’ ಎಣಿಸುವುದಕ್ಕೆ ಹೊರಟಿದ್ದಾರೆ. 2010ರಲ್ಲಿ ಮಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಇಟ್ಟುಕೊಂಡು ರಕ್ಷಣ್ ಕಥೆ-ಚಿತ್ರಕಥೆ ಮಾಡಿ ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ. ಬೇರೆ ದೇಶಕ್ಕೆ ಹೋದಾಗ ಹೆಣ್ಣುಮಕ್ಕಳು ಅನುಭವಿಸುವ ತೊಂದರೆಗಳು, ದುಡ್ಡಿನಿಂದ ಆಗುವ ಸಮಸ್ಯೆಗಳನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.

ಭಾವನಾ ಇಲ್ಲಿ ಅಕ್ಕ-ತಂಗಿಯರಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರವನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ. ಭಾವನಾ ಅಲ್ಲದೆ ಪದ್ಮಜಾ ರಾವ್, ಶ್ರೀನಿವಾಸ ಪ್ರಭು ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಪಿಂಕ್ ನೋಟ್’ನ ಶೇ.60ರಷ್ಟು ಭಾಗದ ಚಿತ್ರೀಕರಣ ದುಬೈನಲ್ಲಿ ನಡೆಯುತ್ತದಂತೆ. ಉಳಿದಂತೆ ಬೆಂಗಳೂರು, ಉಡುಪಿ, ಮಲ್ಪೆ ಮುಂತಾದ ಕಡೆ ನಡೆಯಲಿದೆ. ಜೆಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ದಾವಣಗೆರೆಯ ಎಚ್. ಆನಂದಪ್ಪ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net