ಬಹುಭಾಷೆಯಲ್ಲಿ ಮೂಡಿ ಬರಲಿದೆ ಭಜರಂಗಿ 2

Ullasa- bhajarangi
Published on

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಾಯಕತ್ವದ ‘ಭಜರಂಗಿ 2’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಶಿವಣ್ಣನ ಜನ್ಮದಿನದ ಪ್ರಯುಕ್ತ ರಿಲೀಸ್ ಆಗಿದ್ದ ಟೀಸರ್​ಗೆ ಕೇವಲ ಸ್ಯಾಂಡಲ್​ವುಡ್ ಅಷ್ಟೇ ಅಲ್ಲದೆ, ಪಕ್ಕದ ಬಾಲಿವುಡ್, ತೆಲುಗು, ತಮಿಳು ಚಿತ್ರರಂಗಗಳಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿತ್ತು.

ಇದೀಗ ಇದೇ ಚಿತ್ರ ಬಹುಭಾಷೆಯಲ್ಲಿ ಬಿಡುಗಡೆ ಆಗಲಿದೆ ಎಂಬುದನ್ನು ಸ್ವತಃ ಚಿತ್ರದ ನಿರ್ವಪಕ ಜಯಣ್ಣ ಮತ್ತು ನಿರ್ದೇಶಕ ಎ. ಹರ್ಷ ಹೇಳಿಕೊಂಡಿದ್ದಾರೆ. ಟೀಸರ್​ಗೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡ ಹರ್ಷ, ‘ಚಿತ್ರದ ಟೀಸರ್ ಬಿಡುಗಡೆ ಮಾಡುವವರೆಗೂ ನಾವು ಪರಭಾಷೆಯ ಬಗ್ಗೆ ವಿಚಾರ ಮಾಡಿರಲಿಲ್ಲ. ಯಾವಾಗ ಕನ್ನಡದ ಟೀಸರ್​ಗೆ ಎಲ್ಲೆಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಯಿತೋ, ಪರಭಾಷೆಯಲ್ಲಿಯೂ ಬಿಡುಗಡೆ ಮಾಡಬೇಕೆಂಬ ಪ್ಲಾ್ಯನ್ ನಡೆದಿದೆ.

ಅದರಲ್ಲೂ ಬಾಲಿವುಡ್ ಮತ್ತು ಟಾಲಿವುಡ್​ನವರು ಟೀಸರ್ ಮೆಚ್ಚಿಕೊಂಡು, ಡಬ್ಬಿಂಗ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ನಾವು ಎಲ್ಲವನ್ನೂ ಪೆಂಡಿಂಗ್​ನಲ್ಲಿ ಇಟ್ಟಿದ್ದೇವೆ. ಎಲ್ಲವೂ ಅಂದುಕೊಂಡಂತೆ ಕೂಡಿಬಂದರೆ ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾರೆ ಹರ್ಷ.

ಟೀಸರ್​ಗೆ ಪರಭಾಷೆಗಳಿಂದ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಹರ್ಷ, ಡಬ್ಬಿಂಗ್ ಕಲಾವಿದರು ಮತ್ತು ಬೇರೆ ಬೇರೆ ಭಾಷೆಗಳಿಗೆ ಸಂಭಾಷಣೆ ಅನುವಾದಕರನ್ನೂ ಸಂರ್ಪಸಿದ್ದಾರೆ. ಸದ್ಯದಲ್ಲೇ ಈ ಕೆಲಸಗಳು ಶುರುವಾಗುವ ಸಾಧ್ಯತೆ ಇದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಇನ್ನು 10 ದಿನದ ಶೂಟಿಂಗ್ ಮುಗಿದರೆ ‘ಭಜರಂಗಿ 2’ ಮುಕ್ತಾಯವಾಗಲಿದೆ. ಅದಾದ ಬಳಿಕ ಬಿಡುಗಡೆ ಯಾವಾಗ ಎಂಬುದನ್ನು ತಿಳಿಸಲಿದ್ದಾರೆ ಹರ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net