ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ

Bhagyantharu - Final
Published on

ಡಾ ರಾಜಕುಮಾರ್​ ಅವರ ಸೂಪರ್​ ಹಿಟ್​ ಚಿತ್ರಗಳ ಪೈಕಿ ಒಂದು 'ಭಾಗ್ಯವಂತರು'. ತಮಿಳಿನ 'ದೀರ್ಘ ಸುಮಂಗಲಿ' ಚಿತ್ರದ ರೀಮೇಕ್​ ಇದಾಗಿದ್ದು, ದ್ವಾರಕೀಶ್​ ನಿರ್ಮಾಣ ಮಾಡಿದ್ದರು. ಇನ್ನು ಭಾರ್ಗವ ಈ ಚಿತ್ರದ ನಿರ್ದೇಶಕರು. ಇದು ಅವರ ಮೊದಲ ನಿರ್ದೇಶನದ ಚಿತ್ರವಾಗಿತ್ತು.

ಈಗ್ಯಾಕೆ ಈ ಚಿತ್ರದ ವಿಷಯವೆಂದರೆ, 'ಭಾಗ್ಯವಂತರು' ಚಿತ್ರವು ಇದೀಗ ಹೊಸ ತಂತ್ರಜ್ನಾನದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ಈ ಚಿತ್ರವನ್ನು 7.1 ಆಡಿಯೋಗೆ ಅಪ್​ಗ್ರೇಡ್​ ಮಾಡಲಾಗಿದ್ದು, ಡಿಐ ಸಹ ಮಾಡಲಾಗಿದೆ. ಈಗಾಗಲೇ ಚಿತ್ರದ ಕೆಲಸಗಳು ಮುಕ್ತಾಯವಾಗಿದ್ದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ನಲ್ಲೇ ಡಾ. ರಾಜಕುಮಾರ್​ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಬೇಕಿತ್ತು.

ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಇದ್ದುದರಿಂದ ಚಿತ್ರವನ್ನು ಬಿಡುಗಡೆ ಮಾಡಲಾಗಿರಲಿಲ್ಲ. ಈಗ ಚಿತ್ರಪ್ರದರ್ಶನ ಶುರುವಾದ ಮೇಲೆ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಶ್ರೀ ಮುನೇಶ್ವರ ಫಿಲಂಸ್​ನ ಎಂ. ಮುನಿರಾಜು ತೀರ್ಮಾನಿಸಿದ್ದಾರೆ. ಮುನಿರಾಜು ಇದಕ್ಕೂ ಮುನ್ನ ಡಾ. ರಾಜಕುಮಾರ್​ ಅವರ 'ಆಪರೇಷನ್​ ಡೈಮಂಡ್​ ರಾಕೆಟ್​', 'ದಾರಿ ತಪ್ಪಿದ ಮಗ' ಮುಂತಾದ ಚಿತ್ರಗಳನ್ನು ಹೊಸ ತಂತ್ರಜ್ನಾನದಲ್ಲಿ ಬಿಡುಗಡೆ ಮಾಡಿದ್ದರು. ಈಗ 'ಭಾಗ್ಯಂತರು' ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

'ಭಾಗ್ಯವಂತರು' ಚಿತ್ರದಲ್ಲಿ ಡಾ. ರಾಜಕುಮಾರ್​, ಬಿ. ಸರೋಜಾದೇವಿ, ಬಾಲಕೃಷ್ಣ, ಎಂ.ಎನ್​. ಲಕ್ಷ್ಮೀದೇವಿ, ಅಶೋಕ್​ ಮುಂತಾದವರು ಅಭಿನಯಿಸಿದ್ದು, ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದವರು ರಾಜನ್​-ನಾಗೇಂದ್ರ. 'ನಿನ್ನ ನನ್ನ ಮನವು ...', 'ನಿನ್ನ ಸ್ನೇಹಕೆ ನಾ ಸೋತು ಹೋದೆನು ...' ಮುಂತಾದ ಸೂಪರ್​ ಹಿಟ್​ ಹಾಡುಗಳಿರುವ ಈ ಚಿತ್ರವು, ಕನ್ನಡ ಚಿತ್ರರಂಗದ ಕೆಲವು ಅದ್ಭುತ ಎಮೋಷನಲ್​ ಚಿತ್ರಗಳಲ್ಲೊಂದು ಎಂದು ಜನಪ್ರಿಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net