

'ಗೋಲ್ಡನ್ ಸ್ಟಾರ್' ಗಣೇಶ್ ಅಭಿನಯದಲ್ಲಿ ಈ ಹಿಂದೆ ಪ್ರಶಾಂತ್ ರಾಜ್, 'ಜೂಮ್' ಮತ್ತು 'ಆರೆಂಜ್' ಎಂಬ ಎರಡು ಚಿತ್ರಗಳನ್ನು ಮಾಡಿದ್ದರು. ಇದೀಗ ಗಣೇಶ್ ಅವರ ಹುಟ್ಟುಹಬ್ಬದ ಸಂದಭರ್ದಲ್ಲಿ ಪ್ರಶಾಂತ್ ರಾಜ್ ಇನ್ನೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಸದ್ಯಕ್ಕೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 'ಪ್ರೊಡಕ್ಷನ್ ನಂ 7' ಎಂಬ ಹೆಸರಿನಲ್ಲಿ ಈ ಚಿತ್ರದ ಕೆಲಸಗಳು ಶುರುವಾಗಿದ್ದು, ಪ್ರಶಾಂತ್ ರಾಜ್ ತಮ್ಮ 'ನಿಮ್ಮ ಸಿನಿಮಾ' ಪ್ರೊಡಕ್ಷನ್ ಹೌಸ್ನ 10ನೇ ವಾರ್ಷಿಕೋತ್ಸವ ಮತ್ತು ಗಣೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ಚಿತ್ರವನ್ನು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಗಣೇಶ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕೇಕ್ ಮಾಡಿಸಿ, ಅವರಿಂದ ಕಟ್ ಮಾಡಿಸಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.
ಈ ಚಿತ್ರಕ್ಕೂ 'ಜೂಮ್' ಮತ್ತು 'ಆರೆಂಜ್' ಚಿತ್ರಗಳಿಗೆ ಕೆಲಸ ಮಾಡಿದ ತಂತ್ರಜ್ಱರೇ ಮುಂದುವರೆಯಲಿದ್ದಾರೆ. ಎಸ್.ಎಸ್. ತಮನ್ ಸಂಗೀತ ಸಂಯೋಜಿಸಲಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರೆ. ಈ ಹಿಂದಿನ ಎರಡು ಚಿತ್ರಗಳು ರೊಮ್ಯಾಂಟಿಕ್ ಕಾಮಿಡಿಗಳಾಗಿದ್ದು, ಈ ಬಾರಿ ಪ್ರಶಾಂತ್ ರಾಜ್ ಅವರು ಗಣೇಶ್ ಅಭಿನಯದಲ್ಲಿ ಕ್ರೈಮ್ ಥ್ರಿಲ್ಲರ್ ಮಾಡುವುದಕ್ಕೆ ಹೊರಟಿದ್ದಾರೆ.
ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದರೂ, ಚಿತ್ರ ಶುರುವಾಗುವುದಕ್ಕೆ ಇನ್ನೂ ಒಂದು ವರ್ಷವಾದರೂ ಬೇಕು. ಪ್ರಮುಖವಾಗಿ 'ಗಾಳಿಪಟ 2' ಮತ್ತು 'ಸಖತ್' ಚಿತ್ರಗಳಲ್ಲಿ ನಟಿಸುತ್ತಿರುವ ಗಣೇಶ್, ಮೊದಲು ಆ ಚಿತ್ರಗಳನ್ನು ಕಂಪ್ಲೀಟ್ ಮಾಡಬೇಕಿದೆ. ಆ ನಂತರ, ಮಹೇಶ್ ಗೌಡ ನಿರ್ದೇಶನದ 'ತ್ರಿಬಲ್ ರೈಡಿಂಗ್' ಎಂಬ ಚಿತ್ರದಲ್ಲಿ ಗಣೇಶ್ ನಟಿಸಲಿದ್ದಾರೆ. ಈ ಮೂರು ಚಿತ್ರಗಳಿಗೆ ಒಂದು ವರ್ಷವಾದರೂ ಬೇಕು.
ಇದನ್ನೂ ಓದಿ: ಕಾರ್ತಿಕಾ ಲೈಟ್ ಬಿಲ್ ಕೇಳಿ ನೀವು ಶಾಕ್ ಆಗ್ತೀರಾ!
ಇದಲ್ಲದೆ ಸಿಂಪಲ್ ಸುನಿ ನಿರ್ದೇಶನದ 'ದಿ ಸ್ಟೋರಿ ಆಫ್ ರಾಯಗಢ' ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಆ ಚಿತ್ರದ ಕೆಲಸಗಳು ಇವೆಲ್ಲಾ ಚಿತ್ರದ ಮುಗಿದ ನಂತರ ಪ್ರಾರಂಭವಾಗುತ್ತದಂತೆ. ಹಾಗಾಗಿ ಪ್ರಶಾಂತ್ ರಾಜ್ ಅವರ ಚಿತ್ರವು ಮುಂದಿನ ವರ್ಷ ಶುರುವಾಗುತ್ತದೋ ಅಥವಾ 2022ಕ್ಕೆ ಪ್ರಾರಂಭವಾಗುತ್ತದೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.