

ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ 994 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 197 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 7,173ಕ್ಕೆ ಏರಿಕೆಯಾಗಿದೆ. ಐವರು ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 105ಕ್ಕೆ ತಲುಪಿದೆ.
ಒಂದೇ ದಿನ 994 ಜನರು ಸೋಂಕಿಗೆ ತುತ್ತಾಗಿರುವುದು ಈವರೆಗಿನ ದಾಖಲೆಯಾಗಿದೆ. ಒಂದು ವಾರದಲ್ಲಿ (ಜೂ.27 ರಿಂದ ಜು.3ರವರೆಗೆ) ಒಟ್ಟು 5,230 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಆಸ್ಪತ್ರೆ, ಆರೈಕೆ ಕೇಂದ್ರಗಳು ಸೇರಿ 6,297 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
495 ಕಂಟೇನ್ಮೆಂಟ್ ಪ್ರದೇಶ: 6 ವಾರ್ಡ್ಗಳ ಕೆಲ ಪ್ರದೇಶಗಳಲ್ಲಿ ಸೀಲ್ಡೌನ್ ಮತ್ತು 495 ಸ್ಥಳದಲ್ಲಿ ಕಂಟೇನ್ಮೆಂಟ್ ವಿಧಿಸಲಾಗಿದೆ.
ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ: ಇಂದಿರಾನಗರದಲ್ಲಿರುವ ಇಎಸ್ಐ ಆಸ್ಪತ್ರೆಯನ್ನು ಕರೊನಾ ಚಿಕಿತ್ಸೆಗೆಂದು ಸರ್ಕಾರ ಗುರುತಿಸಿದೆ. ಕಾರ್ವಿುಕ ಸಚಿವ ಶಿವರಾಮ್ ಹೆಬ್ಬಾರ್ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ 300 ಬೆಡ್ಗಳನ್ನು ಅಳವಡಿಸಬಹುದು. 66 ವೈದ್ಯರನ್ನು ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಚಿವರಿಗೆ ಅಧಿಕಾರಿಗಳು ತಿಳಿಸಿದರು.
ಕ್ವಾರಂಟೈನ್ ಸೀಲ್ ಇದ್ದರೆ ಬಸ್ಗಿಲ್ಲ ಪ್ರವೇಶ: ಹೋಂ ಕ್ವಾರಂಟೈನ್ನಲ್ಲಿ ಇರುವವರನ್ನು ಬಸ್ನಲ್ಲಿ ಹತ್ತಿಸಿಕೊಳ್ಳಬಾರದು ಎಂದು ನಿರ್ವಾಹಕರಿಗೆ ಬಿಎಂಟಿಸಿ ಸೂಚಿಸಿದೆ. ಹೋಂ ಕ್ವಾರಂಟೈನ್ನಲ್ಲಿ ಇರಬೇಕಾದ 24 ಜನರು ಕಳೆದ ಶನಿವಾರ ವೆುಜೆಸ್ಟಿಕ್ನಿಂದ ಕಾಡುಗುಡಿವರೆಗೆ ಬಸ್ನಲ್ಲಿ ಸಂಚರಿಸಿದ್ದರು. ಅದರಿಂದಾಗಿ ಪ್ರಯಾಣಿಕರು ಆತಂಕಗೊಂಡಿದ್ದರು. ಹೀಗಾಗಿ ಹೋಂ ಅಥವಾ ಸಾಂಸ್ಥಿಕ ಕ್ವಾರಂಟೈನ್ ಸೀಲ್ ಹೊಂದಿರುವವರನ್ನು ಬಸ್ನಲ್ಲಿ ಹತ್ತಿಸಿಕೊಳ್ಳದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ರಸ್ತೆ-ಮನೆಯಲ್ಲೇ ಕರೊನಾ ಮರಣಮೃದಂಗ
ಗರಿಷ್ಠ ಸೋಂಕಿತರು: ಕಳೆದ 24 ಗಂಟೆಯಲ್ಲಿ ಶಾಂತಲಾನಗರದಲ್ಲಿ ಗರಿಷ್ಠ (62) ಸೋಂಕಿತರು ಪತ್ತೆಯಾಗಿದ್ದಾರೆ. ಚಾಮರಾಜಪೇಟೆಯಲ್ಲಿ 37, ಗಾಂಧಿನಗರ 36, ಧರ್ಮರಾಯಸ್ವಾಮಿ ದೇವಾಲಯ 28, ಆರ್.ಆರ್. ನಗರ 25, ಶ್ರೀನಗರ, ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಾಡುಮಲ್ಲೇಶ್ವರ ದೇವಾಲಯ ವಾರ್ಡ್ನಲ್ಲಿ ತಲಾ 13 ಸೋಂಕಿತರು ಪತ್ತೆಯಾಗಿದ್ದಾರೆ. ವಸಂತಪುರ, ವಸಂತನಗರ, ಬಸವನಗುಡಿಯಲ್ಲಿ ತಲಾ 12, ರಾಜಾಜಿನಗರ, ಜಯನಗರದಲ್ಲಿ ತಲಾ 11 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ ಕಚೇರಿಯ ಆಯುಕ್ತರ ಕಾರಿನ ಚಾಲಕನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಸೀಲ್ಡೌನ್ ಮಾಡಿ, ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಬಿಬಿಎಂಪಿ ದಕ್ಷಿಣ ವಲಯ ಆರೋಗ್ಯ ಇಲಾಖೆ ಡಿ ದರ್ಜೆ ನೌಕರನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯನ್ನು ಬಿಬಿಎಂಪಿ ಅಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ.
ಸ್ಮಶಾನದಲ್ಲಿ ಮೃತದೇಹ ಹೂಳಲು ವಿರೋಧ: ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ಒಟ್ಟು 8 ಎಕರೆ ಭೂಮಿಯನ್ನು ಕರೊನಾ ಸೋಂಕಿತರ ಮೃತದೇಹ ಹೂಳಲು ಜಿಲ್ಲಾಡಳಿತ ನಿಗದಿಗೊಳಿಸಿದೆ. ಆದರೆ, ಸೋಂಕು ಗ್ರಾಮದ ಜನರಿಗೆ ಹರಡುತ್ತದೆ. ಹೀಗಾಗಿ, ಶವ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಂಕಿತರು ಮೃತಪಟ್ಟರೆ, ಇಲ್ಲಿ ತಂದು ಹೂಳುವುದು ಬೇಡ ಎಂದಿದ್ದಾರೆ.