More

    ರಸ್ತೆ-ಮನೆಯಲ್ಲೇ ಕರೊನಾ ಮರಣಮೃದಂಗ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೊನಾ ಸೋಂಕಿಗೆ ಚಿಕಿತ್ಸೆ ಸಿಗದೆ ಒಬ್ಬರು ರಸ್ತೆಯಲ್ಲಿ ಮತ್ತು ಇನ್ನೊಬ್ಬರು ಮನೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಸೇರಿ ಒಟ್ಟು 5 ಕರೊನಾ ಸೋಂಕಿತರು ಹಾಗೂ ಅನ್ಯ ಕಾಯಿಲೆಗೆ ಚಿಕಿತ್ಸೆ ಸಿಗದೆ ಮೂವರು ಶುಕ್ರವಾರ ಮೃತಪಟ್ಟಿದ್ದಾರೆ.

    ಸೋಂಕಿನಿಂದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ವರ್ಷ ಮತ್ತು 58 ಪುರುಷ ಸಾವಿಗೀಡಾಗಿದ್ದಾರೆ. ಕ್ಯಾನ್ಸರ್ ಮತ್ತು ಇತರೆ ಕಾಯಿಲೆಯಿಂದ ಬಳಲು ತ್ತಿದ್ದ 54 ವರ್ಷದ ಕರೊನಾ ಸೋಂಕಿತ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹನುಮಂತನಗರದ 56 ವರ್ಷದ ವ್ಯಕ್ತಿ, ಕಾಚರಕನಹಳ್ಳಿಯ 88 ವರ್ಷದ ವೃದ್ಧ ಹಾಗೂ ಥಣಿಸಂದ್ರದ 17 ವರ್ಷದ ಯುವತಿ, ಸಂಪಂಗಿರಾಮನಗರದ 55 ವರ್ಷದ ವ್ಯಕ್ತಿ, ಕಲಾಸಿಪಾಳ್ಯದ 61 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

    ಆಂಬುಲೆನ್ಸ್ ಬರಲಿಲ್ಲ: ಹನುಮಂತನಗರದ ರಾಮಾಂಜನೇಯ ರಸ್ತೆಯ 7ನೇ ಕ್ರಾಸ್​ನಲ್ಲಿ 56 ವರ್ಷದ ಕರೊನಾ ಸೋಂಕಿತ ಜೀವ ಬಿಟ್ಟಿದ್ದಾರೆ. ಮೂರು ದಿನಗಳ ಹಿಂದೆ ಕರೊನಾ ಪರೀಕ್ಷೆ ಮಾಡಿಸಿದ್ದ ವ್ಯಕ್ತಿಗೆ ಸೋಂಕಿರುವುದು ದೃಢಪಟ್ಟಿತ್ತು. ಬಿಬಿಎಂಪಿ ಅಧಿಕಾರಿಗಳಿಗೆ ಆಂಬುಲೆನ್ಸ್ ಕಳಿಸುವಂತೆ ಕುಟುಂಬದವರು ಕರೆ ಮಾಡಿದರೂ ಸರಿಯಾದ ಸಮಯಕ್ಕೆ ಬಂದಿಲ್ಲ. ಉಸಿರಾಟ ಸಮಸ್ಯೆ ತೀವ್ರಗೊಂಡು, ಆಟೋದಲ್ಲಿ ಆಸ್ಪತ್ರೆಗೆ ಹೋಗಲು ರಸ್ತೆಗೆ ಬಂದಾಗ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ. ಸಂಪಂಗಿರಾಮನಗರದ 55 ವರ್ಷದ ನಿವಾಸಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಇನ್ನೇನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಅನ್ನುವಷ್ಟರಲ್ಲೇ ಮೃತಪಟ್ಟಿದ್ದಾರೆ.

    ಕಾಚರಕನಹಳ್ಳಿಯ 88 ವರ್ಷದ ವೃದ್ಧ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದರೆ, ಕರೊನಾ ಟೆಸ್ಟ್ ಮಾಡಿಸಿಕೊಂಡು ಬರುವಂತೆ ತಿಳಿಸಿದ್ದಾರೆ. ಚಿಕಿತ್ಸೆ ಸಿಗದೆ ಮನೆಗೆ ಮರಳಿದ ಅವರು ತೀವ್ರ ಅಸ್ವಸ್ಥಗೊಂಡು ಬೆಳಗ್ಗೆ ಮೃತರಾಗಿದ್ದಾರೆ. ಅವರ ಗಂಟಲು ದ್ರವವನ್ನು ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಕಲಾಸಿಪಾಳ್ಯದಲ್ಲಿ ಕಿಡ್ನಿ ವೈಫಲ್ಯ ಹಾಗೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ 61 ವರ್ಷದ ವೃದ್ಧನಿಗೆ ಶುಕ್ರವಾರ ಬೆಳಗ್ಗೆ ಸೋಂಕು ದೃಢಪಟ್ಟಿದ್ದು, ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟಿದ್ದಾರೆ.

    ಕಾಮಾಕ್ಷಿಪಾಳ್ಯದ ವ್ಯಕ್ತಿ ಸಾವು: ಕಾಮಾಕ್ಷಿಪಾಳ್ಯದ 50 ವರ್ಷದ ವ್ಯಕ್ತಿಯೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಳಗ್ಗೆ ವಾಕಿಂಗ್​ಗೆ ಹೋಗಿದ್ದ ವ್ಯಕ್ತಿಗೆ ಹೃದಯಾಘಾತವಾಗಿದೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ಸ್ಥಳೀಯರೇ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಒಳಗೆ ಸೇರಿಸಿಕೊಳ್ಳದೆ ಪ್ರಾಥಮಿಕ ಚಿಕಿತ್ಸೆಯೂ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೃತರ ಅಂತ್ಯಕ್ರಿಯೆ ನಡೆಸುವುದೂ ಕಷ್ಟವಾಗಿದೆ.

    ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ: ಹನುಮಂತನಗರದಲ್ಲಿ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹೋದಾಗ ಕುಟುಂಬದ ಸದಸ್ಯರು ಮನೆ ಹತ್ತಿರ ಬೇಡ, ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಂದು ತಿಳಿಸಿದ್ದಾರೆ. ಹೀಗಾಗಿ, ವ್ಯಕ್ತಿ ನಡೆದುಕೊಂಡು ಬರುವಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ ಆರೋಗ್ಯ ಸಿಬ್ಬಂದಿ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

    ಐಸಿಯು ಬೆಡ್ ಸಿಗದೆ ಮೃತ್ಯು: ಹೊಸಕೋಟೆ ತಾಲೂಕಿನ 45 ವರ್ಷದ ಮಹಿಳೆ ತಲೆಗೆ ಗಂಭೀರ ಗಾಯವಾಗಿತ್ತು. ಎಂವಿಜೆ, ಮಣಿಪಾಲ್ ಮತ್ತು ವೈದೇಹಿ ಆಸ್ವತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಕಡೆಗೆ ಸಿಲಿಕಾನ್ ಸಿಟಿ ಆಸ್ವತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಚಿಕಿತ್ಸೆ ನೀಡಿದ ವೈದ್ಯರು ಮಿದುಳಿಗೆ ಪೆಟ್ಟಾಗಿದ್ದು, ನಮ್ಮಲ್ಲಿ ಐಸಿಯು ಹಾಸಿಗೆ ಖಾಲಿಯಿಲ್ಲ ಎಂದು ಹೇಳಿ ಬೇರೆಡೆ ಕರೆದೊಯ್ಯಲು ತಿಳಿಸಿದ್ದಾರೆ. ರಾತ್ರಿ ವೇಳೆ ಐಸಿಯು ಚಿಕಿತ್ಸೆಯ ಬೆಡ್​ಗಾಗಿ ಹುಡುಕಾಡಿದರೂ ಸಿಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 37 ವರ್ಷದ ಯುವಕ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಕೋವಿಡ್ ಪರೀಕ್ಷೆ ಮಾಡಿಸದ ಕಾರಣ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆಸ್ಪತ್ರೆಗೆ ಅಲೆದಾಡಿ, ಕೊನೆಯಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

    ಪತ್ನಿ ಶವಕ್ಕಾಗಿ 6 ದಿನ ಕಾದ ಪತಿ: ಸುಂಕದಕಟ್ಟೆ ಕೂಲಿ ಕಾರ್ವಿುಕರೊಬ್ಬರು ತಮ್ಮ ಪತ್ನಿಗೆ ಅನಾರೋಗ್ಯವಿದ್ದ ಕಾರಣ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಜೂ.24ರಂದು ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯುವಾಗ ಪತ್ನಿ ಮೃತಪಟ್ಟಿದ್ದಾರೆ. ಮೃತಹೇಹವನ್ನು ರಾಜಾಜಿನಗರ ಇಎಸ್​ಐ ಆಸ್ಪತ್ರೆಗೆ ರವಾನಿಸಲಾಗಿದ್ದು, ಕರೊನಾ ವರದಿ ಬರುವ ತನಕ ನೀಡುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆರು ದಿನಗಳ ನಂತರ ಅಂದರೆ ಜು.2ರಂದು ವರದಿ ಕೈಸೇರಿದೆ. ವರದಿಯಲ್ಲಿ ಕರೊನಾ ಪಾಸಿಟಿವ್ ಎಂಬುದು ಕಂಡುಬಂದಿದೆ. ಆಸ್ಪತ್ರೆ ಸಿಬ್ಬಂದಿ ಸಹಕಾರದಿಂದ ಪತ್ನಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ಮೇಲ್ಮನೆ ಹಿಡಿತಕ್ಕೆ ದಳ ಬಲ: ಎರಡು ಮುಖ್ಯ ಕಾರಣಗಳಿಗೆ ಬಿಜೆಪಿಗೆ ಬೇಕು ಬೆಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts