

ಬಾರಾನಗರ: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಾಲಿ ನಟಿಯೊರ್ವಳು ಮೃತಪಟ್ಟಿದ್ದಾಳೆ. ಈ ದುರ್ಘಟನೆಯು ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಬಾರಾನಗರದಲ್ಲಿ ನಡೆದಿದ್ದು, ನಟಿ ಸುಚಂದ್ರಾ ದಾಸ್‌ಗುಪ್ತ ಮೃತಪಟ್ಟಿದ್ದು ಖಚಿತ ಎಂದು ಪೊಲೀಸರು ತಿಳಿಸಿದ್ದಾರೆ.
ಸುಚಂದ್ರಾ ದಾಸ್‌ಗುಪ್ತ ಹಲವಾರು ಜನಪ್ರಿಯ ಬಂಗಾಳಿ ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಿಸುವುದರ ಜತೆಗೆ ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿ ಜನಪ್ರಿಯತೆಯನ್ನು ಗಳಿಸಿದ್ದರು.
ಶೂಟಿಂಗ್ ನಂತರ, ನಟಿಯು ಶನಿವಾರ ರಾತ್ರಿ ಮನೆಗೆ ಮರಳಲು ಅಪ್ಲಿಕೇಶನ್ ಆಧಾರಿತ ಬೈಕ್ ರೈಡ್ ಬುಕ್ ಮಾಡಿ ಅಲ್ಲಿಂದ ಹೊರಟಿದ್ದಾರೆ. ಈ ನಡುವೆ ಸೈಕಲ್ ಸವಾರನೊಬ್ಬ ಇದ್ದಕ್ಕಿದ್ದಂತೆ ಬೈಕ್ ಮುಂದೆ ಬಂದಿದ್ದರಿಂದ ಚಾಲಕ ಬ್ರೇಕ್ ತುಳಿದಿದ್ದಾನೆ. ಒಮ್ಮಿಂದೊಮ್ಮೇಲೆ ಬ್ರೇಕ್ ತುಳಿದ ಪರಿಣಾಮ ನಟಿಯು ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಆಕೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮರಣ ಹೊಂದಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.(ಏಜೆನ್ಸೀಸ್)