

ವಿಜಯವಾಣಿ ಸುದ್ದಿಜಾಲ ಬೈಂದೂರು
ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಕಡಿಮೆಯಾಗುತ್ತಿದೆ. ಇವರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರಕಿದರೆ ಅನುಕೂಲವಾಗಲಿದೆ ಎಂದು ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣದ ಪ್ರೊ.ಚಾನ್ಸಲರ್ ಡಾ.ಎಚ್.ಎಸ್ ಬಳ್ಳಾಲ್ ಹೇಳಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಕಾರದಲ್ಲಿ ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿ, ತುರ್ತು ಚಿಕಿತ್ಸೆ, ಡಯಾಲಿಸಿಸ್ ಹಾಗೂ ಇತರ ಆರೋಗ್ಯ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ, ಬೈಂದೂರು ಭಾಗದ ರೋಗಿಗಳು ತುರ್ತುಚಿಕಿತ್ಸೆ ಹಾಗೂ ಡಯಾಲಿಸಿಸ್ ಸೌಲಭ್ಯಕ್ಕಾಗಿ ಸುಮಾರು 80 ಕಿ.ಮೀ ದೂರದ ಮಣಿಪಾಲಕ್ಕೆ ತೆರಳುವ ಅನಿವಾರ್ಯತೆ ಇತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಮಣಿಪಾಲ ಆಸ್ಪತ್ರೆಯ ಸಹಕಾರದಲ್ಲಿ ಬೈಂದೂರಿನಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಚಿಕಿತ್ಸೆ ಒದಗಿಸುವ ಭರವಸೆ ದೊರೆತಿದೆ ಎಂದರು.
ಸಿಎ ಎಸ್.ಬಿ. ಶೆಟ್ಟಿ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಪ್ರಮುಖರಾದ ನಾಕಟ್ಟೆ ತಿಮ್ಮಪ್ಪ ಶೆಟ್ಟಿ, ಬಿ.ಎಸ್ ಸುರೇಶ ಶೆಟ್ಟಿ, ಡಾ.ನಾಗಭೂಷಣ ಉಡುಪ, ಡಾ.ಪ್ರೇಮಾನಂದ, ಡಾ.ಆನಂದ ವೇಣುಗೋಪಾಲ ಉಪಸ್ಥಿತರಿದ್ದರು. ಡಾ.ಅವಿನಾಶ ಶೆಟ್ಟಿ ಪ್ರಸ್ತಾವನೆಗೈದರು. ಡಾ.ಅಣ್ಣಪ್ಪ ಶೆಟ್ಟಿ ಸ್ವಾಗತಿಸಿದರು. ಮೋಹನ ಶೆಟ್ಟಿ ವಂದಿಸಿದರು. ರಾಜೇಶ್ ನಿರೂಪಿಸಿದರು.