

ಬೆಂಗಳೂರು: ಕೇರಳದ ವಾಯುನಾಡಿನಲ್ಲಿ ಇತ್ತೀಚಿಗೆ ಸಂಭಂವಿಸಿದ ಭೂ ಕುಸಿತ ದುರಂತದ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಮೇಲೆ ವಿಪಕ್ಷ ನಾಯಕ ಆರ್.ಅಶೋಕ(Ashoka) ವಾಗ್ದಾಳಿ ನಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಕೇರಳದ ಸಿಎಂಗೆ ಪೋಸ್ಟ್ ಮಾಡಿರುವ ಪತ್ರವನ್ನು ಉಲ್ಲೇಖಿಸಿ ಆರ್.ಅಶೋಕ ಟೀಕಿಸಿದ್ದಾರೆ.
''ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಖುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ'' ಎಂದು ಕಿಡಿಕಾರಿದ್ದಾರೆ.
'ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಲು ಹಣವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಯಿಂದ ಸಾವನ್ನಪ್ಪಿರುವ ಬಾಣಂತಿ ಮಹಿಳೆಯರ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ. ಬೆಂಗಳೂರಿನ ಉದ್ದಗಲಕ್ಕೂ ಬಾಯ್ತೆರೆದಿರುವ ರಸ್ತೆಗುಂಡಿ ಮುಚ್ಚಲು ಹಣವಿಲ್ಲ. ಆದರೆ ಹೈಕಮಾಂಡ್ ನಾಯಕರನ್ನು ಓಲೈಸಲು ಕೇರಳದಲ್ಲಿ ಮನೆ ನಿರ್ಮಿಸಿಕೊಡಲು ಹೊರಟಿದೆ ಈ ನಾಡದ್ರೋಹಿ ಕರ್ನಾಟಕ ಸರ್ಕಾರ' ಎಂದು ಹರಿಹಾಯ್ದಿದ್ದಾರೆ.
ಬಿ.ವೈ.ವಿಜಯೇಂದ್ರ ಕಿಡಿ
ಕರ್ನಾಟಕದ ರಸ್ತೆಗಳು ಟಾರ್ಗಿಂತ ಹೆಚ್ಚು ಗುಂಡಿಗಳನ್ನು ಹೊಂದಿವೆ, ಹೂಡಿಕೆಗಳು ತೆಲಂಗಾಣಕ್ಕೆ ಜಾರುತ್ತಿವೆ, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಮತ್ತು ನಿರುದ್ಯೋಗ ಹೆಚ್ಚುತ್ತಿದೆ. ಆದರೂ, ಸಿಎಂ ಸಿದ್ದರಾಮಯ್ಯ ಕೇರಳದಲ್ಲಿ ಮನೆಗಳನ್ನು ನಿರ್ಮಿಸುವುದಾಗಿ ಮೊದಲು ಭರವಸೆ ನೀಡಿದವರು, ಈಗ ಇದಕ್ಕೆ ಅನುಕೂಲವಾಗುವಂತೆ ಭೂಮಿ ಖರೀದಿಸುವ ಮೂಲಕ ದುಪ್ಪಟ್ಟು ಮಾಡಲು ಬಯಸುತ್ತಾರೆಯೇ? ಸರ್ ಎಂದು ಪ್ರಶ್ನಿಸಿದ್ದಾರೆ.
ನೀವು ಕೆಲಸ ಮಾಡುತ್ತಿರುವುದು ಕರ್ನಾಟಕದ ಜನರಿಗಾಗಿಯೇ ಅಥವಾ ಗಾಂಧಿ ಕುಟುಂಬಕ್ಕಾಗಿಯೇ? ಇದು ಕರ್ನಾಟಕಕ್ಕೆ ಬದ್ಧವಾಗಿರುವ ನಾಯಕನ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆಯೇ? ನಮ್ಮ ರಾಜ್ಯವು ತನ್ನ ಜನರಿಗೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ನಾಯಕತ್ವಕ್ಕೆ ಅರ್ಹವಾಗಿದೆ, ರಾಜಕೀಯ ಓಲೈಕೆಗಾಗಿ ರಾಜ್ಯದ ಅಗತ್ಯಗಳನ್ನು ಬದಿಗೊತ್ತುವ ನಾಯಕತ್ವವಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಕಿಡಿಕಾರಿದ್ದಾರೆ.