

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಪದಾಧಿಕಾರಿಗಳ ಸಭೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದಲ್ಲಿ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಸ್ಥಾಪಕ ಅಧ್ಯಕ್ಷ ವಸಂತ್ ಸಾಲಿಯಾನ್ ಉದ್ಘಾಟಿಸಿದರು. ಅನಾಮಧೇಯ ವ್ಯಕ್ತಿ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಿಸಿದ ತನಿಖಾ ವಿಚಾರಗಳನ್ನು ಮುಂದಿಟ್ಟು ಕ್ಷೇತ್ರಕ್ಕೆ ಹಾಗೂ ಧರ್ಮಾಧಿಕಾರಿಗಳಿಗೆ ಮತ್ತು ಅವರ ಕುಟುಂಬ ವರ್ಗದವರನ್ನು ಮಾಧ್ಯಮಗಳಲ್ಲಿ ನಿಂದಿಸುವ, ಕ್ಷೇತ್ರಕ್ಕೆ ಅಪಚಾರವೆಸಗುವ ಅಪಪ್ರಚಾರಗಳು ಪದೇಪದೆ ನಡೆಯುತ್ತಿದ್ದು ಇದನ್ನು ಸಭೆಯಲ್ಲಿ ಖಂಡಿಸಲಾಯಿತು.
2025-26ನೇ ಸಾಲಿನ ಕ್ರಿಯಾ ಯೋಜನೆ ಅನುಷ್ಠಾನ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲಿ ಮಾದಕದ್ರವ್ಯ ವಿರೋಧಿ ಸಮಿತಿ ರಚಿಸಿ ಜಾಗೃತಿ ಮೂಡಿಸುವ ಕಾರ್ಯ ಸ್ವಾಗತಾರ್ಹ. ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 30 ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ದುಶ್ಚಟದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆ ಆಚರಿಸಿರುವ ಬಗ್ಗೆ, ಮದ್ಯ ಅನಧಿಕೃತ ಮಾರಾಟ ಹಾಗೂ ಕೋಳಿ ಅಂಕದ ಬಗ್ಗೆ ಕ್ರಮ ಕೈಗೊಳ್ಳುವಂತೆ, ವರ್ಷಾಂತ್ಯದಲ್ಲಿ ಗುರುವಾಯನಕೆರೆ ಕಚೇರಿ ವ್ಯಾಪ್ತಿಯಲ್ಲಿ ಮದ್ಯವರ್ಜನ ಶಿಬಿರ ನಡೆಸುವುದರ ಬಗ್ಗೆ ಹಾಗೂ ನವ ಜೀವನ ಸಮಿತಿ ಸದಸ್ಯರ ಅನುಪಾಲನೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕ ದಿನೇಶ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ವೆಂಕಟರಾಯ ಅಡೂರ್, ಡಿ.ಎ.ರಹಿಮಾನ್, ತಿಮ್ಮಪ್ಪ ಗೌಡ ಬೆಲಾಳು ಮತ್ತಿತರರು ಉಪಸ್ಥಿತರಿದ್ದರು. ವಿವೇಕ್ ವಿನ್ಸೆಂಟ್ ಪಾಯಿಸ್ ವಿಚಾರ ಮಂಡಿಸಿದರು. ಗಣೇಶ್ ಅಚಾರ್ಯ ಕ್ರಿಯಾ ಯೋಜನೆ ಮಂಡಿಸಿದರು. ಯಶೋಧರ ಕೆ. ಸ್ವಾಗತಿಸಿದರು. ಮಂಜುಳಾ ಕಾರಂತ ಪ್ರಾರ್ಥನೆ ಹಾಡಿದರು. ಅಶೋಕ್ ವಂದಿಸಿದರು.
ಎಸ್‌ಐಟಿಗೆ ಸ್ವಾಗತ
ಅನಾಮಿಕ ವ್ಯಕ್ತಿ ಧರ್ಮಸ್ಥಳದ ಆಸು ಪಾಸು ಅನಧಿಕೃತವಾಗಿ ಶವಗಳನ್ನು ಹೂಳಲಾಗಿದೆ ಎನ್ನುವ ವಿಚಾರದಂತೆ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿ ತಂಡ ರಚಿಸಿ ತನಿಖೆ ನಡೆಸುತ್ತಿರುವುದು ತಾಲೂಕು ಜನಜಾಗೃತಿ ವೇದಿಕೆ ಸ್ವಾಗತಿಸುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.