ಸಿನಿಮಾ

ಶಾಲೆಗಳ ಆರಂಭಕ್ಕೆ ದಿನಗಣನೆ, ಜಿಲ್ಲೆಯಲ್ಲಿ ಶೇ.99.77 ಪಠ್ಯಪುಸ್ತಕ ಪೂರೈಕೆ

ಬಳ್ಳಾರಿ: ಕಳೆದ ವರ್ಷ ಕೆಲ ವಿಷಯಗಳ ಪಠ್ಯಪುಸ್ತಕಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳಿಂದ ಸಂಗ್ರಹಿಸಿ ಮಕ್ಕಳಿಗೆ ನೀಡಲಾಗಿತ್ತು. ಆದರೆ, ಈ ಬಾರಿ ಶಾಲೆ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ಬಂದಿವೆ. ಮೇ 29ರಿಂದ ಶಾಲೆಗಳು ಶುರುವಾಗಲಿದ್ದು, ದಾಖಲಾತಿ ಪ್ರಕ್ರಿಯೆ, ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ.

ಜಿಲ್ಲೆಯಿಂದ 10.90 ಲಕ್ಷ ಪಠ್ಯಪುಸ್ತಕ ಬೇಡಿಕೆ ಕಳಿಸಲಾಗಿದ್ದು, ಈ ಪೈಕಿ 10.89 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ. ಪಠ್ಯಪುಸ್ತಕ ಪೂರೈಕೆ ವಿಳಂಬವಾದರೆ ಸಕಾಲದಲ್ಲಿ ಪಾಠ ಮುಗಿಸಲು ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಈ ಸಲ ಸಕಾಲಕ್ಕೆ ಸರಬರಾಜು ಮಾಡಲಾಗಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್​​, ಪ್ರಾಂಶುಪಾಲ ಅಮಾನತು

ಚುನಾವಣೆ ಮುಗಿದ ಬೆನ್ನಲ್ಲೇ ಶಿಕ್ಷಕರು ಶಾಲೆಗಳತ್ತ ಮುಖಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಶಾಲೆಗಳ ಆರಂಭಕ್ಕೆ 15 ದಿನ ಬಾಕಿ ಇರುವಾಗಲೇ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿವೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 2.90 ಲಕ್ಷ ಮಕ್ಕಳು ಶಾಲೆಗೆ ನೋಂದಣಿ ಮಾಡಿಸಿಕೊಂಡಿದ್ದು, ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಎಲ್ಲ ವಿಷಯವಾರು ಪಠ್ಯಪುಸ್ತಕಗಳನ್ನು ಹಂಚಿಕೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ನೀಡಿದ್ದ ಬೇಡಿಕೆಯಂತೆ ಶೇ.99.77 ಪಠ್ಯಪುಸ್ತಕಗಳು ಬಂದಿದ್ದು, ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಸಿದ್ದು, ಶಾಲೆ ಆರಂಭದಲ್ಲೇ ಮಕ್ಕಳಿಗೆ ವಿತರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

BOOKS DISTRIBUTION

ಬೇಡಿಕೆಗೆ ತಕ್ಕಂತೆ ಸರಬರಾಜು

ಜಿಲ್ಲೆಯಲ್ಲಿ ಒಟ್ಟು 10.90 ಲಕ್ಷ ಪಠ್ಯಪುಸ್ತಕದ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿತ್ತು. ಅದರಂತೆ 10.89 ಲಕ್ಷ ಉಚಿತ ಮತ್ತು 4.65 ಲಕ್ಷ ಮಾರಾಟದ ಪಠ್ಯಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ ಶಾಲೆಗಳಿಗೆ ತಲುಪಿಸಲಾಗಿದೆ. ಈಗಾಗಲೇ ಬೇಡಿಕೆಗೆ ತಕ್ಕಂತೆ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ.

ಮೇ 29ರಿಂದ ಶಾಲೆಗಳು ಆರಂಭಗೊಳ್ಳಲಿದ್ದು, ಮೊದಲ ಎರಡು ವಾರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 773 ಸರ್ಕಾರಿ, 79 ಅನುದಾನಿತ, 603 ಖಾಸಗಿ ಶಾಲೆಗಳಿದ್ದು, 2.90 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಒಂದು ಜತೆ ಸಮವಸ್ತ್ರ ವಿತರಣೆ

ಪ್ರಸಕ್ತ ಸಾಲಿನಲ್ಲಿ 2023-24ನೇ ಸಾಲಿನ ವಿದ್ಯಾವಿಕಾಸ ಯೋಜನೆಯಡಿ ಒಟ್ಟು 1.28 ಲಕ್ಷ ಮಕ್ಕಳಿಗೆ ಸಮವಸ್ತ್ರ ಪೂರೈಸುವಂತೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರಂತೆ 1.28 ಲಕ್ಷ ಮಕ್ಕಳಿಗೆ ಸಮವಸ್ತ್ರ ಸಹ ಸರಬರಾಜು ಮಾಡಲಾಗಿದೆ.

ಕಳೆದ ವರ್ಷ 11,700 ಸಮವಸ್ತ್ರ ಉಳಿದಿದ್ದು, ಅದನ್ನು ಈ ಬಾರಿ ಶಾಲೆಗೆ ಬರುವ ಮಕ್ಕಳಿಗೆ ವಿತರಿಸಲಾಗುತ್ತಿದೆ. ಈಗಾಗಲೇ ಏಪ್ರಿಲ್ ಅಂತ್ಯಕ್ಕೆ ಭಾಗಶಃ ಶಾಲೆಗಳಿಗೆ ಸಮವಸ್ತ್ರ ಪೂರೈಸಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮೊದಲ ತಿಂಗಳಿಂದ ಹೊಸ ಸಮವಸ್ತ್ರ ಧರಿಸಿ ಶಾಲೆಗೆ ಆಗಮಿಸಬಹುದಾಗಿದೆ.

ವಿಶೇಷ ದಾಖಲಾತಿ ಆಂದೋಲನ

ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪಾಲಕರಿಗೆ ಅರಿವು ಮೂಡಿಸಲು ಜೂನ್‌ನಲ್ಲಿ ಜಿಲ್ಲಾದ್ಯಂತ ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳಲಾಗಿದೆ. ಮನೆಮನೆಗೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳ ಕುರಿತು ಸಮೀಕ್ಷೆ ನಡೆಸಿ ಅವರನ್ನು ಮರಳಿ ಕರೆತರಲು ಪ್ರಯತ್ನಿಸಲಾಗುತ್ತದೆ. ಮೇ 29ರಿಂದ ಶಾಲೆಗಳು ಆರಂಭಗೊಳ್ಳಲಿದ್ದು, ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆ ಆರಂಭವಾದ ಮೊದಲ ವಾರದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಎಲ್ಲ ಅಧಿಕಾರಿಗಳು, ಮುಖ್ಯಶಿಕ್ಷಕರಿಗೆ ತಿಳಿಸಲಾಗಿದೆ.
ಅಂದಾನಪ್ಪ ಎಂ.ವಡಿಗೇರಿ
ಡಿಡಿಪಿಐ, ಬಳ್ಳಾರಿ


ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ 2023-24ನೇ ಸಾಲಿನಲ್ಲಿ ಪಠ್ಯಪುಸ್ತಕ ಪೂರೈಕೆ ಕುರಿತು ಶೇಕಡವಾರು ಸಾಧನೆಯ ಅಂಕಿ-ಅಂಶ.
ತಾಲೂಕು ಉಚಿತ ಪೂರೈಕೆ ಮಾರಾಟ

ಬಳ್ಳಾರಿ ಪೂರ್ವ ಶೇ.99.68 ಶೇ.100
ಬಳ್ಳಾರಿ ಪಶ್ಚಿಮ ಶೇ.99.04 ಶೇ.99.95
ಸಂಡೂರು ಶೇ.99.86 ಶೇ.100
ಸಿರಗುಪ್ಪ ಶೇ.99.92 ಶೇ.100

Latest Posts

ಲೈಫ್‌ಸ್ಟೈಲ್