

ಕಡಬ: ಬೆಳಂದೂರು ಗ್ರಾಪಂ ಸಾಮಾನ್ಯ ಸಭೆ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಅಧ್ಯಕ್ಷತೆಯಲ್ಲಿ ಜರುಗಿತು.
ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬಗ್ಗೆ ವಿಷಯ ಪ್ರಸ್ತಾಪಗೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ದರೆ ಕುಸಿತ, ನೆರೆ ಇತ್ಯಾದಿ ಸಂತ್ರಸ್ತರ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಹೆದ್ದಾರಿಯ ಬೈತಡ್ಕ ಎಂಬಲ್ಲಿ ರಸ್ತೆ ಬದಿ ಕುಸಿತಗೊಂಡು ಅಪಾಯ ಸ್ಥಿತಿಯಲ್ಲಿದೆ. ರಸ್ತೆ ಕುಸಿತಗೊಂಡಿರುವ ಮಣ್ಣು ಪಕ್ಕದ ನದಿಗೆ ಬಿದ್ದು, ಬ್ಲಾಕ್ ಆಗಿ ಪಕ್ಕದ ಕೃಷಿ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಮೋಹನ ಅಗಳಿ ಹೇಳಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು. ಪಳ್ಳತ್ತಾರು ಎಂಬಲ್ಲಿ ತಡೆಗೋಡೆ ಕುಸಿತಗೊಂಡಿರುವ ಬಗ್ಗೆ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಪ್ರಸ್ತಾಪಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಂಚೆ ಸೇವೆಗಳಿಗೆ ಸುಲಭವಾಗಿ ಪ್ರವೇಶಿಸಲು ಸಂಪರ್ಕ ರಸ್ತೆ ಬಳಿ ಸೂಚನಾಫಲಕ ಅಳವಡಿಸುವ ಬಗ್ಗೆ ಕ್ರಮಕೈಗೊಳ್ಳುವ ಸುತ್ತೋಲೆ ಓದಲಾಯಿತು. ಪಳ್ಳತ್ತಾರು ಶಾಲಾ ಬಳಿ ದರೆ ಕುಸಿತಗೊಂಡಿದ್ದು, ತಡೆಗೋಡೆ ರಚನೆ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ವಿಟ್ಠಲ ಗೌಡ ಅಗಳಿ, ಮೋಹನ್ ಅಗಳಿ, ಜಯರಾಮ ಬೆಳಂದೂರು, ಪಾರ್ವತಿ ಮರಕ್ಕಡ, ಪ್ರವೀಣ್ ಕೆರೆನಾರು, ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಗೌರಿ ಮಾದೋಡಿ, ಉಮೇಶ್ವರಿ ಅಗಳಿ ಉಪಸ್ಥಿತರಿದ್ದರು.
ಸಿಬ್ಬಂದಿ ಮಮತಾ, ಗೀತಾ, ಹರ್ಷಿತ್, ಸಂತೋಷ್, ಪ್ರಶಾಂತಿ, ವಿಮಲಾ ಸಹಕರಿಸಿದರು. ಲೆಕ್ಕಸಹಾಯಕಿ ಸುನಂದಾ ಇಲಾಖೆ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಪಿಡಿಒ ನಾರಾಯಣ್ ನಿರೂಪಿಸಿದರು.
ಕುದ್ಮಾರು ಶಾಲೆಗೆ ಶೌಚಗೃಹ ಪ್ರಸ್ತಾಪ
ಬೆಳಂದೂರು ಗ್ರಾಪಂ ಹಳೇ ಕಟ್ಟಡವನ್ನು ಗ್ರಾಮ ಆಡಳಿತಾಧಿಕಾರಿಗೆ ನೀಡುವಂತೆ ಬೆಳಂದೂರು, ಕಾಯಿಮಣ ಗ್ರಾಮದ ಸಾರ್ವಜನಿಕರು ನೀಡಿರುವ ಅರ್ಜಿ ಕುರಿತು ಪ್ರಸ್ತಾಪಗೊಂಡು, ಪಂಚಾಯಿತಿ ಹಳೇ ಕಟ್ಟಡ ಯಥಾಸ್ಥಿತಿ ಪಂಚಾಯಿತಿ ಸ್ವಾಧೀನದಲ್ಲಿರುವಂತೆ ಬಹುಮತದಿಂದ ತೀರ್ಮಾನಿಸಲಾಯಿತು. ಕುದ್ಮಾರು ಶಾಲೆಗೆ ಶೌಚಗೃಹ ರಚನೆ ಕುರಿತು, ಗ್ರಾಪಂನಲ್ಲಿ ಅನುದಾನ ಲಭ್ಯವಿಲ್ಲದ ಕಾರಣ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.