

|ರವಿ ಗೋಸಾವಿ ಬೆಳಗಾವಿ
ಉದ್ಯೋಗಾವಕಾಶಕ್ಕಾಗಿ ಪದವೀಧರರು, ವೇತನ ಹೆಚ್ಚಳ್ಳಕ್ಕಾಗಿ ನೌಕರರು ಸೇರಿದಂತೆ ವಿವಿಧ ಸಂಘಟನೆಗಳ ಹಕ್ಕೊತ್ತಾಯ ಹಾಗೂ ಹೆಚ್ಚಿನ ಸೌಲಭ್ಯಕ್ಕಾಗಿ ಮೀಸಲಾತಿ ಒದಗಿಸಿ ಎನ್ನುವ ಹಲವು ಸಮುದಾಯಗಳ ಪ್ರತಿಭಟನಾ ಸ್ಥಳದಲ್ಲಿ ಮೂಗನೋರ್ವ ಮೌನವಾಗಿಯೇ ಮಾಸ್ಕ್ ಮಾರಾಟ ಮಾಡಿ, ಬದುಕು ರೂಪಿಸಿಕೊಳ್ಳುತ್ತಿರುವ ಜೀವನಪ್ರೀತಿ ಯುವ ಜನಾಂಗಕ್ಕೆ ಮಾದರಿಯಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಸಂಘಟನೆಗಳು ತಮ್ಮ ಬೇಕು-ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮನವಿ ಮಾಡುತ್ತಿವೆ. ದಿನವೂ ಸಾವಿರಾರೂ ಜನ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾ ಬೇಡಿಕೆಗಳಿಗೆ ಕಿವಿಗೊಡದ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಅಸಮಾಧಾನ ಹೊರಹಾಕುತ್ತಿದ್ದು, ಇದೇ ಸ್ಥಳದಲ್ಲಿ ಕಿವುಡ ಹಾಗೂ ಮೂಗನೋರ್ವ ಬದುಕು ಕಟ್ಟಿಕೊಳ್ಳುತ್ತಿರುವ ಪರಿ ಎಂಥವರನ್ನೂ ಆಕರ್ಷಿಸುತ್ತದೆ.
ಬೆಳಗಾವಿಯ ಆಜಾದ್ ನಗರದ ಮೊಹ್ಮದಗಲ್ಲಿ ನಿವಾಸಿ ಇಲಿಯಾಸಹ್ಮದ್ ಅತ್ತಾರ ಹುಟ್ಟು ಕಿವುಡ ಹಾಗೂ ಮೂಕರಾಗಿದ್ದಾರೆ. ಬಾಲ್ಯದಿಂದಲೂ ಸ್ವಾವಲಂಬಿ ಬದುಕು ರೂಢಿಸಿಕೊಂಡಿರುವ ಇಲಿಯಾಸಹ್ಮದ್‌ಗೆ ಈಗ 48ರ ಪ್ರಾಯ. ‘ದಿ ಬೆಳಗಾವಿ ಜಿಲ್ಲಾ ಅಸೋಸಿಯೇಷನ್ ಆಫ್ ದಿ ಡೀಫ್’ ಸಂಘದ ಆಜೀವ ಸದಸ್ಯತ್ವ ಪಡೆದಿರುವ ಇವರು, ಪುತ್ರ-ಪುತ್ರಿ ಹಾಗೂ ಪತ್ನಿಯೊಂದಿಗೆ ತುಂಬು ಸಂಸಾರ ಸಾಗಿಸುತ್ತಿದ್ದು, ಸೀಜನ್‌ಗೆ ತಕ್ಕಂತೆ ಕಾಲಕ್ಕನುಗುಣವಾಗಿ ಸನ್ನೆಗಳ ಮೂಲಕವೇ ವಸ್ತುಗಳನ್ನು ಮಾರಾಟ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಬೆಳಗಾವಿ ನಗರದ ಗಣಪತಿ ಗಲ್ಲಿ ಸೇರಿದಂತೆ ನಗರದ ಬಹುತೇಕ ಗಲ್ಲಿಗಲ್ಲಿಗಳಲ್ಲಿ ಮಳೆಗಾಲದಲ್ಲಿ ರೇನ್‌ಕೋಟ್, ಛತ್ರಿ, ಚಳಿಗಾಲದಲ್ಲಿ ಸ್ವೆಟರ್, ಟೊಪ್ಪಿಗೆ, ಸಾಕ್ಸ್ ಸೇರಿದಂತೆ ಹಣ್ಣು-ಹಂಪಲುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಬಂದ ಲಾಭದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಮಗಳಿಗೆ ಈಗಾಗಲೇ ವಿವಾಹ ಮಾಡಿದ್ದು, ಮಗನನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಸಿದ್ದಾರೆ.
ಎಲ್ಲವೂ ಸರಾಗವಾಗಿ ನಡೆಯುತ್ತಿರುವಾಗಲೇ ಎದುರಾಗಿದ್ದ ಕರೊನಾ, ಕಿವುಡ-ಮೂಕ ವ್ಯಾಪಾರಿಗೆ ಇನ್ನಿಲ್ಲದ ಚಿಂತೆಗೀಡು ಮಾಡಿತ್ತು. ಎದೆಗುಂದದ ಇಲಿಯಾಸ್ಮದ್, ಮಾಸ್ಕ್ ಮಾರಾಟ ಆರಂಭಿಸಿದರು. ಇದೀಗ ಮತ್ತೆ ರೂಪಾಂತರಿ ತಳಿ ಹರಡುತ್ತಿರುವುದರಿಂದ ಮಾಸ್ಕ್ ಅಗತ್ಯ ಎಂದು ಪ್ರತಿಭಟನಾ ಸ್ಥಳದಲ್ಲಿ ಮಾಸ್ಕ್ ಮಾರುತ್ತಿದ್ದಾರೆ.
ಬಸ್ತವಾಡ-ಕೊಂಡಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಒಂದು ಕೈಯಲ್ಲಿ ಮಾಸ್ಕ್ ಹಿಡಿದು, ಮತ್ತೊಂದು ಅಂಗೈನಲ್ಲಿ ಮಗ ಬರೆದುಕಳುಹಿಸಿದ್ದ ಬೆಲೆ ತೋರಿಸುತ್ತಲೇ ವ್ಯಾಪಾರ ಮಾಡುತ್ತಿದ್ದ ಮೂಕನ ಜೀವನಪ್ರೀತಿ ಕಂಡ ಪ್ರತಿಯೊಬ್ಬರೂ ಮಾಸ್ಕ್ ಖರೀದಿಸಿ ಪ್ರೋತ್ಸಾಹ ಮಾಡುತ್ತಲೇ, ಯೋಗ ಕ್ಷೇಮ ವಿಚಾರಿಸುತ್ತಿದ್ದ ದೃಶ್ಯ ದಿನವೀಡಿ ಪ್ರತಿಭಟನಾ ಸ್ಥಳದಲ್ಲಿ ಮಾಮೂಲಾಗಿದ್ದು, ಆತನ ಸ್ವಾವಲಂಬಿ ಬದುಕಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಒಂದೇ ವ್ಯಾಪಾರ ಮಾಡದೆ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಬಟ್ಟೆ, ಹಣ್ಣು ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಕಿವಿ ಕೇಳಲ್ಲ, ಮಾತು ಬಾರದಿದ್ದರೂ ಅಪ್ಪ ನಮ್ಮೆಲ್ಲಾ ಬೇಡಿಕೆಗಳನ್ನು ಪೂರೈಸುತ್ತಲೇ ಶ್ರಮಪಟ್ಟು ನಮ್ಮನ್ನೆಲ್ಲ ಸಾಕಿ ಸಲುಹಿದ್ದಾರೆ. ನನ್ನನ್ನು ಇಂಜಿನಿಯರಿಂಗ್ ಓದಿಸಿದ್ದಾರೆ. ಕೆಲಸ ಸಿಕ್ಕ ಕ್ಷಣದಿಂದಲೇ ಅಪ್ಪನ ಕಷ್ಟ ಕಳೆಯುವ ಆಸೆ ಇದೆ.
| ಮಲ್ಲಿಕ್‌ಜಾನ್ ಅತ್ತಾರ (ಇಲಿಯಾಸಹ್ಮದ್ ಅತ್ತಾರ ಅವರ ಮಗ)