

ಕಾರವಾರ: ಬೇಲೆಕೇರಿಯಲ್ಲಿ ಅಕ್ರಮ ಎಂಬ ಕಳಂಕ ಹೊತ್ತು ಸುಮಾರು 14 ವರ್ಷಗಳಿಂದ ಕೊಳೆಯುತ್ತಿರುವ ಅಲ್ಪ ಅದಿರಿಗೆ ಮುಕ್ತಿ ಸಿಗುವ ದಿನ ಹತ್ತಿರ ಬಂದಂತಿದೆ.
ಬೇಲೆಕೇರಿ ಅಕ್ರಮ ಅದಿರು ಸಾಗಣೆ ಹಾಗೂ ಅದಿರು ಕಳ್ಳ ಸಾಗಣೆಯ ಬಗ್ಗೆ ಸಿಬಿಐ ಹಾಗೂ ಎಸ್‌ಐಟಿ ತನಿಖೆ ನಡೆಸಿದ್ದು, ಆರೋಪ ಪಟ್ಟಿ ಸಲ್ಲಿಸದ ಕೆಲವು ಕಂಪನಿಗಳು ತಮ್ಮ ಅದಿರನ್ನು ವಿಲೇವಾರಿ ಮಾಡಲು ಹೈಕೋರ್ಟ್ನಿಂದ ಷರತ್ತುಬದ್ಧ ಅನುಮತಿ ಪಡೆದಿವೆ.ಅದರಂತೆ ಮೊಟ್ಟ ಮೊದಲು ಅದಿರನ್ನು ವಶಕ್ಕೆ ಪಡೆದಿದ್ದ ಅರಣ್ಯ ಇಲಾಖೆಯು ಅದಿರನ್ನು ಕಂಪನಿಗಳಿಗೆ ಬಿಟ್ಟುಕೊಡಲು ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಸದ್ಯ ಅರಣ್ಯ ಇಲಾಖೆಯ ಮನವಿಯಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಽಕಾರಿಗಳು ಎರಡು ಕಂಪನಿಗಳಿಗೆ ಸೇರಿದ ಕೆಲವು ಅದಿರು ಗುಡ್ಡೆಗಳ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ.
ಬೇಲೆಕೇರಿಯಲ್ಲಿ 11 ಕಂಪನಿಗೆ ಸೇರಿದ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಅದಿರು 56 ಗುಡ್ಡೆ ಹಾಕಿಕೊಂಡು ಬಿದ್ದು 14 ವರ್ಷಗಳು ಕಳೆದಿವೆ. ಅವುಗಳ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಅದರಲ್ಲಿ ಸೆಸಾ ಗೋವಾ, ರಾಜಮಹಲ್ ಸಿಲ್ಕ್, ಜೆಮ್‌ಟೆಕ್, ವೇದಾಂತ ಕಂಪನಿಗಳ 4 ಅದಿರು ಗುಡ್ಡೆಗಳನ್ನು ಮಾತ್ರ ವಿಲೇವಾರಿ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ಸುಮಾರು 35 ಸಾವಿರ ಮೆಟ್ರಿಕ್ ಟನ್ ಅದಿರು ಸಾಗಣೆಗೆ ಅನುಮತಿ ಸಿಕ್ಕಂತಾಗಿದ್ದು, ಅದಕ್ಕೆ ಕಂಪನಿಗಳಿಂದ ಬಾಂಡ್ ಗಳನ್ನು ಪಡೆಯಬೇಕಾಗಿದೆ. ನ್ಯಾಯಾಲಯ ಸಾಕಷ್ಟು ಇನ್ನೂ ಸಾಕಷ್ಟು ಕಾನೂನು ಪ್ರಕ್ರಿಯೆಗಳು ಬಾಕಿ ಇದ್ದು, ನಂತರ ಮಾತ್ರ ನಾವು ಅದಿರನ್ನು ವಿಲೇವಾರಿ ಮಾಡಲು ಅನುಮತಿ ನೀಡಲಾಗುವುದು ಎಂದು ಅಂಕೋಲಾ ಎಸಿಎಫ್ ಕೆ.ಸಿ.ಜಯೇಶ ವಿಜಯವಾಣಿಗೆ ತಿಳಿಸಿದ್ದಾರೆ.
ಏನಾಗಿತ್ತು..?
ಅಂಕೋಲಾ ಬೇಲೆಕೇರಿ ಹಾಗೂ ಕಾರವಾರದ ಬೈತಖೋಲ್ ಬಂದರಿನಿAದ ಅಕ್ರಮ ಅದಿರು ಸಾಗಣೆಯಾಗುತ್ತಿರುವ ಮಾಹಿತಿ ಪಡೆದ ಅರಣ್ಯಾಽಕಾರಿಗಳು 2010 ರ ಮಾರ್ಚ್ 20 ರಂದು ಸುಮಾರು 250 ಕೋಟಿ ರೂ. ಮೌಲ್ಯದ 8.5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಬೇಲೆಕೇರಿಯಲ್ಲಿ 50 ಸಾವಿರ ಟನ್ ಅದಿರನ್ನು ಕಾರವಾರದಲ್ಲಿ ವಶಕ್ಕೆ ಪಡೆದಿದ್ದರು. ಆದರೆ,ವಶಕ್ಕೆ ಪಡೆದ ಅದಿರಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅದಿರು ಕಳ್ಳತನವಾಗಿರುವ ಬಗ್ಗೆ ಅದೇ ವರ್ಷ ಜೂನ್‌ನಲ್ಲಿ ದೂರು ದಾಖಲಾಗಿತ್ತು. ಅಕ್ರಮ ಅದಿರು ಪ್ರಕರಣದ ಬಗ್ಗೆ ಲೋಕಾಯುಕ್ತ, ಸಿಐಡಿ, ಸಿಬಿಐ, ಎಸ್‌ಐಟಿ ಹೀಗೆ ವಿವಿಧ ಸಂಸ್ಥೆಗಳು ತನಿಖೆ ನಡೆಸಿದ್ದವು. ಸಿಬಿಐ ಪ್ರಾಥಮಿಕ ವರದಿ ಸಲ್ಲಿಸಿ, ದಾಖಲೆಗಳನ್ನು ಕಲೆಹಾಕುವುದು ಕಷ್ಟವಾಗುತ್ತಿದೆ ಎಂದು ತನಿಖೆ ಕೈಬಿಟ್ಟಿತ್ತು. ಎಸ್‌ಐಟಿ ತನಿಖೆ ನಡೆಸಿ ಚಾರ್ಜ್ ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರ ವಿಚಾರಣೆ ನಡೆಯುತ್ತಿದೆ. ಕಾರವಾರ ಬಂದರಿನಲ್ಲಿ ಇದ್ದ ಸುಮಾಉ 37 ಸಾವಿರ ಮೆಟ್ರಿಕಟ್ ಟನ್ ಅದಿರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಳೆದ ವರ್ಷ ಹರಾಜು ಮಾಡಿದೆ.