ಅಮೃತಸರ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿದೆ. ಈ ಬಾರಿಯ ಚುನಾವಣೆಯೂ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಯಾವುದೇ ಹಿನ್ನೆಲೆ ಇಲ್ಲದೇ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹಲವರು ಗೆಲುವು ಕಂಡಿರುವುದು ವಿಶೇಷವಾಗಿದೆ. ಈ ಪೈಕಿ ಜೈಲಿನಲ್ಲಿದ್ದುಕೊಂಡೆ ಇಬ್ಬರು ಅಭ್ಯರ್ಥಿಗಳು ಗೆಲುವು ಕಂಡಿದ್ದು, ಇಂದಿರಾ ಗಾಂಧಿ ಹತ್ಯೆ ಆರೋಪಿಯ ಮಗ ಕೂಡ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.
ಈ ಪೈಕಿ ಇಂದಿರಾ ಗಾಂಧಿ ಹತ್ಯೆಯ ಹಂತಕ ಬಿಯಾಂತ್ ಸಿಂಗ್ ಅವರ ಪುತ್ರ ಸರಬ್ಜಿತ್ ಸಿಂಗ್ ಖಾಲ್ಸಾ ಕೂಡ ಗೆಲುವು ಕಂಡಿದ್ದಾರೆ. ಪಂಜಾಬ್‌ನ ಫರೀದ್ಕೋಟ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸರಬ್ಜಿತ್ ಸಿಂಗ್ ಖಾಲ್ಸಾ 70 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದು, ರಾಷ್ಟ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು ಯಾವ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಮೂರು ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ಸರಬ್ಜಿತ್ ಸಿಂಗ್ ಖಾಲ್ಸಾ, ಪ್ರಧಾನಿ ಇಂದಿರಾ ಗಾಂಧಿಯನ್ನು ಹತ್ಯೆಗೈದ ತಂದೆಯ ಮರಣದಂಡನೆಯಿಂದಾಗಿ ಕಳೆದುಹೋದ ತನ್ನ ಯೌವನವನ್ನು ಎತ್ತಿ ತೋರಿಸುವ ಮೂಲಕ ಮತದಾರರ ಅನುಕಂಪವನ್ನು ಗಳಿಸಿದ್ದರು. ಇದಲ್ಲದೆ ಮೂರು ಬಾರಿ ಚುನಾವಣೆಯಲ್ಲಿ ಸೋತ ಅನುಕಂಪವು ಇವರ ಕೈ ಹಿಡಿದಿದ್ದು, ಜನರು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಇವರಿಗೆ ಮಣೆ ಹಾಕಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಸ್ಪರ್ಧಿಸಿ ಗೆದ್ದರು
ಭಯೋತ್ಪಾದನೆ ಆರೋಪದಲ್ಲಿ ಜೈಲು ಸೇರಿರುವ ಇಬ್ಬರು ಅಭ್ಯರ್ಥಿಗಳು ಯಾವುದೇ ಪ್ರಚಾರ ಮಾಡದೇ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮಂಗಳವಾರ (ಜೂನ್04) ಚುನಾವಣಾ ಆಯೋಗವು ಪ್ರಕಟಿಸಿದ ಫಲಿತಾಂಶಗಳಲ್ಲಿ, ಜೈಲಿನಲ್ಲಿರುವ ಸಿಖ್ ಬೋಧಕ ಅಮೃತಪಾಲ್ ಸಿಂಗ್ ಹಾಗೂ ಭಯೋತ್ಪಾದನೆ ಆರೋಪದಲ್ಲಿ ಜೈಲು ಸೇರಿರುವ ಶೇಖ್ ಅಬ್ದುಲ್ ರಶೀದ್ ಬಾರಾಮುಲ್ಲಾ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿಯಾಗಿ ಜೂನ್ 08ರಂದು ನರೇಂದ್ರ ಮೋದಿ ಪ್ರಮಾಣ ವಚನ?
ಇದಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜೈಲಿನಲ್ಲಿದ್ದುಕೊಂಡೆ ಗೆಲುವು ಸಾಧಿಸಿದ್ದಾರೆ. ಪಂಜಾಬ್‌ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್ 1.9 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ವಾರಿಸ್ ದೇ ಪಂಜಾಬ್ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತಪಾಲ್ ಸಿಂಗ್‌ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ. ಮಾದಕ ದ್ರವ್ಯ ವಿರೋಧಿ ಅಭಿಯಾನ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಂದಾಗಿ ಅಮೃತ್ಪಾಲ್ ದೇಶದ ಗಮನ ಸೆಳೆದಿದ್ದನ್ನು.
ಅಬ್ದುಲ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಪ್ರಸ್ತುತ ಭಯೋತ್ಪಾದನೆ ಪ್ರಕರಣದಲ್ಲಿ ಜೈಲು ಸೇರಿರುವ ರಶೀದ್ ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕರಾಗಿದ್ದ ರಶೀದ್ ಬಾರಾಮುಲ್ಲಾದಿಂದ ಸ್ಪರ್ಧಿಸಿದ್ದ. 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಓಮರ್ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿದ್ದ ರಶೀದ್ 2,04,142 ಮತಗಳ ಅಂತರದಲ್ಲಿ ಎದುರಾಳಿಯನ್ನು ಸೋಲಿಸಿದ್ದಾರೆ. ವಿಶೇಷ ಎಂದರೆ ಯಾವುದೇ ಪ್ರಚಾರ ಮಾಡದೇ ಜೈಲಿನಲ್ಲಿದ್ದುಕೊಂಡೇ ಸ್ಪರ್ಧಿಸಿದ ರಶೀದ್ ಚುನಾವಣೆ ಗೆಲ್ಲಲು ಖರ್ಚು ಮಾಡಿದ್ದು ಕೇವಲ ₹ 27,000 ಮಾತ್ರ ಎಂದು ತಿಳಿದು ಬಂದಿದೆ.