

ನವದೆಹಲಿ: ಇತ್ತೀಚೆಗಷ್ಟೇ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಗೆದ್ದ ಟೀಮ್ ಇಂಡಿಯಾ, ರೋಹಿತ್ ಶರ್ಮ ಕ್ಯಾಪ್ಟನ್ಸಿಯಲ್ಲಿ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈಚೆಲ್ಲಿತು. ಈ ಸೋಲಿಗಿಂತ ಲಂಕಾ ಪಡೆಯ ಬೌಲರ್ಗಳಿಗೆ ಬ್ಯಾಟ್ ಬೀಸಲು ಟೀಮ್ ಇಂಡಿಯಾ ಬ್ಯಾಟರ್ಗಳು ಪರದಾಡಿದ್ದನ್ನು ನೋಡಿ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಅಸಮಾಧಾನ ಹೊರಹಾಕಿದರು. ಇದು ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ಗೂ ಕೂಡ ಭಾರೀ ಮುಖಭಂಗ ಉಂಟುಮಾಡಿತು.
2024-25ರ ಆವೃತ್ತಿಯ ಹಿನ್ನಲೆ ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ಪಂದ್ಯದ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿದ ಬಿಸಿಸಿಐ ಇದೀಗ ಹೊಸ ಪ್ರಕಟಣೆಯನ್ನು ಅಧಿಕೃತ ಎಂದು ಜಾರಿಗೊಳಿಸಿದೆ. ಭಾರತ ತಂಡ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. ಇದು ಮುಗಿಯುತ್ತಿದ್ದಂತೆ ಇಂಗ್ಲೆಂಡ್ ತಂಡ ಭಾರತಕ್ಕೆ ಎಂಟ್ರಿ ಕೊಡಲಿದ್ದು, ನಮ್ಮ ನೆಲದಲ್ಲಿಯೇ ಐದು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸಿರೀಸ್ 2025ರ ಜನವರಿ 22ರಿಂದ ಪ್ರಾರಂಭವಾಗಲಿದೆ. ಇದರ ಬೆನ್ನಲ್ಲೇ ಈಗ ಬಿಸಿಸಿಐ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
ಬಿಸಿಸಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, ಇದಕ್ಕೂ ಮೊದಲು, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ಅಕ್ಟೋಬರ್ 6ರಂದು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಈಗ ಗ್ವಾಲಿಯರ್ ನಲ್ಲಿ ಆಯೋಜಿಸಲಾಗುವುದು ಎಂದು ಪರಿಷ್ಕೃತ ಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಬದಲಾವಣೆಗೆ ಕಾರಣ, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆಯುತ್ತಿರುವ ನವೀಕರಣ ಕಾರ್ಯಗಳು. ಹೀಗಾಗಿ ಪ್ರಸ್ತುತ ಯಾವ ಪಂದ್ಯಗಳನ್ನು ಅಲ್ಲಿ ಆಯೋಜಿಸಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗಿದೆ ಎಂದು ಬಿಸಿಸಿಐ ತಿಳಿಸಿದೆ,(ಏಜೆನ್ಸೀಸ್).
ಬಾಂಗ್ಲಾದೇಶ ಭಾರತ ಪ್ರವಾಸ:
ಮೊದಲ ಟೆಸ್ಟ್- ಚೆನ್ನೈ (19ರಿಂದ 23 ಸೆಪ್ಟೆಂಬರ್)
ಎರಡನೇ ಟೆಸ್ಟ್ - ಕಾನ್ಪುರ (ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 )
ಮೊದಲ ಟಿ20- ಗ್ವಾಲಿಯರ್ (ಅಕ್ಟೋಬರ್ 6 )
ಎರಡನೇ ಟಿ20- ದೆಹಲಿ (ಅಕ್ಟೋಬರ್ 9 )
ಮೂರನೇ ಟಿ20- ಹೈದರಾಬಾದ್ (ಅಕ್ಟೋಬರ್ 12)
ಭಾರತಕ್ಕೆ ಇಂಗ್ಲೆಂಡ್ ಪ್ರವಾಸ:
ಮೊದಲ ಟಿ20- ಕೋಲ್ಕತ್ತಾ (ಜನವರಿ 22)
ಎರಡನೇ ಟಿ20- ಚೆನ್ನೈ (ಜನವರಿ 25 )
ಮೂರನೇ ಟಿ20- ರಾಜ್‌ಕೋಟ್ (ಜನವರಿ 28)
ನಾಲ್ಕನೇ ಟಿ20- ಪುಣೆ (ಜನವರಿ 31)
ಐದನೇ ಟಿ20- ಮುಂಬೈ (ಫೆಬ್ರವರಿ 2 )
ಮೊದಲ ಏಕದಿನ- ನಾಗ್ಪುರ (ಫೆಬ್ರವರಿ 6 )
ಎರಡನೇ ಏಕದಿನ- ಕಟಕ್ (ಫೆಬ್ರವರಿ 9 )
ಮೂರನೇ ಏಕದಿನ- ಅಹಮದಾಬಾದ್ (ಫೆಬ್ರವರಿ 12 )