

ನವದೆಹಲಿ: ಕೋಲ್ಕತ ನೈಟ್ರೈಡರ್ಸ್ ತಂಡದ ಮೆಂಟರ್ ಆಗಿ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಮಾಜಿ ಎಡಗೈ ಆರಂಭಿಕ ಗೌತಮ್ ಗಂಭೀರ್, ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವೆನಿಸಿದೆ ಎಂದು ವರದಿಯಾಗಿದೆ.
ಐಪಿಎಲ್ ೈನಲ್ ಪಂದ್ಯದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಜತೆಗೆ ಗಂಭೀರ್ ನಡೆಸಿದ ಮಾತುಕತೆಯ ಬಳಿಕ ಈ ಖಚಿತತೆ ಮೂಡಿದೆ. ದೇಶದ ಹಿತಕ್ಕಾಗಿ ಹುದ್ದೆ ಅಲಂಕರಿಸಲು ಗಂಭೀರ್ ಸಮ್ಮತಿಸಿದ್ದಾರೆ. ಇನ್ನು ಕೆಲ ಔಪಚಾರಿಕತೆಗಳನ್ನು ಪೂರೈಸಿದ ಬಳಿಕ ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಪ್ರಮುಖ ಆಟಗಾರ ಮಾತ್ರವಲ್ಲದೆ, ಇವೆರಡೂ ಟೂರ್ನಿಗಳ ೈನಲ್ ಪಂದ್ಯದಲ್ಲಿ ಭಾರತ ಪರ ಗರಿಷ್ಠ ರನ್ಸ್ಕೋರರ್ ಕೂಡ ಆಗಿದ್ದ ಗಂಭೀರ್, ಟೀಮ್ ಇಂಡಿಯಾ ಕೋಚ್ ಆಗಬೇಕಾದರೆ ಕೆಕೆಆರ್ ತಂಡದ ಮೆಂಟರ್ ಹುದ್ದೆ ತ್ಯಜಿಸಬೇಕಾಗುತ್ತದೆ. ಇದಕ್ಕಾಗಿ ತಂಡದ ಮಾಲೀಕ ಶಾರುಖ್ ಖಾನ್ ಸಮ್ಮತಿಯನ್ನೂ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ವರ್ಷದ 10 ತಿಂಗಳ ಕಾಲ ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸುವುದೇ ಅವರಿಗೆ ಇರುವ ಪ್ರಮುಖ ಸವಾಲೆನಿಸಿದೆ.
ಗಂಭೀರ್ ಭಾರತ ತಂಡದ ನೂತನ ಕೋಚ್ ಆಗುವುದನ್ನು ಐಪಿಎಲ್ ಫ್ರಾಂಚೈಸಿಯೊಂದರ ಮಾಲೀಕರು ಮತ್ತು ಬಿಸಿಸಿಐನಲ್ಲಿನ ಆಗುಹೋಗುಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವ ವೀಕ್ಷಕವಿವರಣೆಕಾರರೊಬ್ಬರು ಕೂಡ ಖಚಿತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.