

BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೀಮಂತ ಮಂಡಳಿ ಎಂಬ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಟೀಮ್ ಇಂಡಿಯಾದ ಸಾರಥ್ಯವನ್ನು ವಹಿಸುವ ಬಿಸಿಸಿಐ, ಪ್ರತಿಯೊಂದು ಹಂತದಲ್ಲಿಯೂ ಭಾರತ ತಂಡಕ್ಕೆ ದೊಡ್ಡ ಬೆನ್ನೆಲುಬಾಗಿ ನಿಂತಿದೆ. ಕಾರ್ಯಕ್ರಮಗಳು, ಆಟಗಾರರ ಯೋಗಕ್ಷೇಮ, ಲೀಗ್ಗಳ ಆಯೋಜನೆ ಮೂಲಕ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸುತ್ತದೆ. ಅಂತೆಯೇ 2023-24ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ ದಾಖಲೆಯ ಆದಾಯ ಕಂಡಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
2023-24ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ 9,741.7 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಇದರಲ್ಲಿ ಶೇ.59ರಷ್ಟು ಐಪಿಎಲ್‌ನಿಂದಲೇ ಹರಿದುಬಂದಿದೆ. 2008ರಲ್ಲಿ ಪ್ರಾರಂಭಗೊಂಡ ಈ ಲೀಗ್ನಿಂದ ಬಿಸಿಸಿಐ ಹೆಚ್ಚಿನ ಹಾಗೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಿನ ಆದಾಯವನ್ನು ನೋಡುತ್ತಿದೆ. ಅಂದಿನಿಂದ, ಈ ಟಿ20 ಲೀಗ್ ಭಾರತೀಯ ಕ್ರಿಕೆಟ್ ಮಂಡಳಿಗೆ ಚಿನ್ನದ ಬಾತುಕೋಳಿಯಾಗಿದೆ. ಇದು ವಿಶ್ವದ ಅತ್ಯುತ್ತಮ ಟಿ20 ಪಂದ್ಯಾವಳಿಗಳಲ್ಲಿ ಒಂದಾಗಿದೆ. ಇದರೊಂದಿಗೆ, ಈ ಲೀಗ್‌ನ ಬ್ರಾಂಡ್ ಮೌಲ್ಯವು ಪ್ರತಿ ವರ್ಷ ಹೆಚ್ಚಳ ಕಾಣುತ್ತಿದೆಯೇ ಹೊರತು ಕುಸಿಯುತ್ತಿಲ್ಲ. ಐಪಿಎಲ್ ಲೀಗ್ನಂತೆ ಇನ್ನೊಂದು ಲೀಗ್ ಅತ್ಯಂತ ಯಶಸ್ವಿಯಾಗಿ ಸಾಗುತ್ತಿರುವ ನಿದರ್ಶನ ಇಲ್ಲವೇ ಇಲ್ಲ ಎಂದರೆ ಖಂಡಿತ ತಪ್ಪಾಗಲಾರದು.
'ರೆಡಿಫ್ಯೂಷನ್' ಮತ್ತು 'ದಿ ಹಿಂದೂ' ವರದಿಯ ಪ್ರಕಾರ, ಬಿಸಿಸಿಐ 2023-24ರ ಆರ್ಥಿಕ ವರ್ಷದಲ್ಲಿ 9,741.7 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಇದರಲ್ಲಿ 5,761 ಕೋಟಿ ರೂ. ಐಪಿಎಲ್‌ನಿಂದಲೇ ಬಂದಿದೆ. ಐಪಿಎಲ್ ಹೊರತುಪಡಿಸಿ, ಟೀಮ್ ಇಂಡಿಯಾ ಆಡುವ ಅಂತಾರಾಷ್ಟ್ರೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಂದ ಬಿಸಿಸಿಐ 361 ಕೋಟಿ ರೂ. ಲಾಭ ಕಂಡಿದೆ. ಇನ್ನು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ನ ಉದ್ಘಾಟನಾ ಆವೃತ್ತಿಯ ಮೂಲಕ ಬಿಸಿಸಿಐ ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ವರದಿ ಹೇಳಿದೆ.
ಇದು ಮೂರು ಸೀಸನ್ಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಕಾರಣವಾಗಿದೆ. ಬಿಸಿಸಿಐ 30,000 ಕೋಟಿ ರೂ. ಮೀಸಲು ಹೊಂದಿದ್ದು, ಇದರಿಂದ ವಾರ್ಷಿಕವಾಗಿ 1,000 ಕೋಟಿ ರೂ. ಬಡ್ಡಿಯನ್ನು ಗಳಿಸುತ್ತದೆ. ಪ್ರಾಯೋಜಕತ್ವಗಳು, ಮಾಧ್ಯಮ ಹಕ್ಕುಗಳು ಮತ್ತು ಪಂದ್ಯದ ದಿನಗಳಿಂದ ಹೆಚ್ಚುತ್ತಿರುವ ಆದಾಯದಿಂದಾಗಿ ಮಂಡಳಿಯ ಆದಾಯವು ಸ್ಥಿರವಾಗಿದೆ ಮತ್ತು ಪ್ರತಿ ವರ್ಷ ಶೇ.10ರಿಂದ 12ರಷ್ಟು ಲಾಭ ಬೆಳೆಯುತ್ತಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).