ಅನಧಿಕೃತ ಫ್ಲೆಕ್ಸ್​ ಅಳವಡಿಕೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ದಂಡ ವಿಧಿಸಿದ ಬಿಬಿಎಂಪಿ

DKS Flex
Published on

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್​ ಹಾಗೂ ಬ್ಯಾನರ್​ಗಳನ್ನು ಅಳವಡಿಸಿದರೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಬಿಎಂಪಿ ಫೈನ್​ ಹಾಕಿದೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ದಿ. ರಾಜೀವ್​ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್​ ಅರಸು ಅವರ ಜನ್ಮಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಕಾಂಗ್ರೆಸ್​ ಪಕ್ಷದ ನಾಯಕರು ಕ್ವೀನ್ಸ್​ ರಸ್ತೆಯಲ್ಲಿರುವ ಕಚೇರಿ ಮುಂಭಾಗ ಫ್ಲೆಕ್ಸ್​ ಅಳವಡಿಸಿದ್ದರು.

ಈ ವಿಚಾರವನ್ನು ತಿಳಿದ ಬಿಬಿಎಂಪಿ ಅಧಿಕಾರಿಗಳು ಫುಟ್​ಪಾತ್​ ಮಧ್ಯದಲ್ಲಿ ಅನಧಿಕೃತವಾಗಿ ಫ್ಲೆಕ್ಸ್​​ ಅಳವಡಿಸಿರುವುದನ್ನು ಕಂಡು ಕೆಪಿಸಿಸಿ ಕಚೇರಿ ಸಿಬ್ಬಂದಿಗೆ ಅನುಮತಿ ಪತ್ರ ತೋರಿಸುವಂತೆ ಹೇಳಿದ್ದಾರೆ. ಅನುಮತಿ ಪತ್ರ ಪಡೆದಿಲ್ಲ ಎಂದು ಕೆಪಿಸಿಸಿ ಕಚೇರಿ ಸಿಬ್ಬಂದಿ ಹೇಳಿದಾಗ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಮೊತ್ತವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಖಾತೆಗೆ ಜಮೆ ಮಾಡುವಂತೆ ಸೂಚಿಸಿ ತೆರಳಿದ್ದಾರೆ.

Dk Shivakumar

ಎಚ್ಚರಿಕೆ ಕೊಟ್ಟವರಿಗೆ ದಂಡ

ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ. ನಗರವನ್ನು ವಿರೂಪಗೊಳಿಸಲು ಮುಂದಾಗುವ ಯಾರೇ ಆದಲ್ಲಿ ಅಂತಹವರ ವಿರುದ್ಧ ಎಫ್​ಐಆರ್ ದಾಖಲಿಸಲಾಗುವುದು. ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಪ್ರದರ್ಶಿಸುವವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಇನ್ನು ಮುಂದೆ ಯಾವುದೇ ಪಕ್ಷ, ಸಂಘಟನೆ ಹಾಗೂ ಖಾಸಗಿ ಕಂಪನಿಗಳು ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net