

ಬೆಂಗಳೂರು: (Virat Kohli pub ) ಬೆಂಗಳೂರಿನ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರಾಟ್ ಕೊಹ್ಲಿ ಅವರ ಸಹ ಮಾಲೀಕತ್ವದ ಪಬ್ ಆಗಿದೆ. ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ಜಾರಿಗೊಳಿಸಿದೆ.
ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆಗೆ ಏಳು ದಿನಗಳೊಳಗೆ ಸಮರ್ಪಕ ಉತ್ತರ ನೀಡದಿದ್ದರೆ ಕಾನೂನು ಕ್ರಮ ಎಂದು ಬಿಬಿಎಂಪಿ ಎಚ್ಚರಿಸಿದೆ. ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರು. ದೂರು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ದೂರುದಾರ, ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಮಾತನಾಡಿ, ಸುಮಾರು ಕಟ್ಟಡಗಳಲ್ಲಿ ಅಗ್ನಿ ಶಾಮಕ ಸುರಕ್ಷಿತೆ ಕ್ರಮಗಳು ಇಲ್ಲದಿರುವುದರಿಂದ ಅಂತಹ ಕಟ್ಟಡಗಳಿಗೆ ಲೈಸೆನ್ಸ್ ಕೊಡಬಾರದು. ಅಗ್ನಿ ಸುರಕ್ಷತೆ ಇರದ ಕಟ್ಟಡಗಳಲ್ಲಿ ಕಾರ್ಯಚಟುವಟಿಕೆ ಮಾಡದಂತೆ ನಿಯಮ ತರಲಾಗಿದೆ. ಆದರೆ, ನಿಯಮಗಳನ್ನು ಮೀರಿ ಪಬ್ಗಳನ್ನು ನಡೆಸಲಾಗುತ್ತಿದೆ.
ರೆಸ್ಟೋರೆಂಟ್ ಬಾರ್ ಹಾಗೂ ಪಬ್ಗಳು ಅಗ್ನಿ ಶಾಮಕದಳದ ಯಾವುದೇ ಸುರಕ್ಷಿತೆಗಳು ಇಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದ್ದಾರೆ. ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಅಗ್ನಿ ಅವಘಡದಿಂದ ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜನ ಜಿಗಿದಿದ್ದರು. ಇಂತಹ ಅವಘಡಗಳು ಮರುಕಳಿಸಬಾರದು ಅಂತ ಬಿಬಿಎಂಪಿ ಹಾಗೂ ಅಗ್ನಿ ಶಾಮಕದಳ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿದೆ ಎಂದು ಹೇಳಿದರು.