

Robin Uthappa: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕನ್ನಡಿಗ ರಾಬಿನ್ ಉತ್ತಪ್ಪ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಅರೆಸ್ಟ್ ವಾರೆಂಟ್ ಜಾರಿ ಮಾಡಿ ಎಂದು ಪಿಎಫ್ಓ ಅಧಿಕಾರಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.
ಸರ್ಕಾರಕ್ಕೆ ಹಾಗೂ ಉದ್ಯೋಗಿಗಳಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟರ್, ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿನಗರ ಪೊಲೀಸರಿಗೆ ಪತ್ರ ಬರೆಯಲಾಗಿದೆ.
ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವ ಹಲವು ಉದ್ಯೋಗಿಗಳಿಗೆ ಪಿಎಫ್ ಹಣ ಪಾವತಿಸದೇ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಕಂಪನಿಯಲ್ಲಿ ಉದ್ಯೋಗಿಗಳ ಸಂಬಳದಿಂದ ಪಿಎಫ್ ಹಣವನ್ನು ತಿಂಗಳು ತಿಂಗಳು ಕಡಿತ ಮಾಡಲಾಗುತ್ತಿತ್ತು. ಆದರೆ ಈ ಹಣವನ್ನು ಉದ್ಯೋಗಿಗಳ ಖಾತೆಗೆ ಹಾಕುತ್ತಿರಲಿಲ್ಲ. ಹೀಗೆ ಸುಮಾರು 23 ಲಕ್ಷ ಹಣವನ್ನು ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪಿಎಫ್ಓ ರಿಜಿನಲ್ ಕಮಿಷನರ್ ಷಡಾಕ್ಷಿರಿ ಗೋಪಾಲ ರೆಡ್ಡಿಯವರು, ಅರೆಸ್ಟ್ ವಾರೆಂಟ್ ಜಾರಿ ಮಾಡಿ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ.
ವಾರೆಂಟ್ ಜಾರಿ ಮಾಡಿ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಷಡಾಕ್ಷರಿ ಗೋಪಾಲ ರೆಡ್ಡಿ ಪತ್ರ ಬರೆದಿದ್ದಾರೆ. ಇನ್ನು ಪಿಎಫ್ಓ ರಿಜಿನಲ್ ಕಮಿಷನರ್ ಅವರಿಂದ ಪತ್ರ ಪಡೆದ ಪುಲಿಕೇಶಿನಗರ ಪೊಲೀಸರಿ ರಾಬಿನ್ ಉತ್ತಪ್ಪ ಅವರಿಗೆ ಹುಡುಕಾಟ ನಡೆಸಿದ್ದಾರೆ.