ಬಿಬಿಎಂಪಿ ಅಗ್ನಿ ಅವಘಡ: ಖಾಸಗಿ ಆಸ್ಪತ್ರೆಯಲ್ಲಿ ಶಿವಕುಮಾರ್, ಜ್ಯೋತಿಗೆ ಮುಂದುವರಿದ ಚಿಕಿತ್ಸೆ

BBMP fire
Published on

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ‘ಗುಣ ನಿಯಂತ್ರಣ ಪ್ರಯೋಗಾಲಯ’ ಕಚೇರಿಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರ ಗಾಯಗೊಂಡಿರುವ ಮುಖ್ಯ ಅಭಿಯಂತರ ಶಿವಕುಮಾರ್ ಹಾಗೂ ಆಪರೇಟರ್ ಜ್ಯೋತಿ ಅವರನ್ನು ಸೋಮವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶೇಷಾದ್ರಿಪುರದ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದು, ಶಿವಕುಮಾರ್ ಅವರ ಆರೋಗ್ಯದಲ್ಲಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜ್ಯೋತಿ ಅವರ ಆರೋಗ್ಯದಲ್ಲಿ ತುಸು ಸುಧಾರಣೆ ಕಂಡುಬಂದಿದೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಮಧ್ಯಾಹ್ನ ಶೇಷಾದ್ರಿಪುರದ ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿ ಶಿವಕುಮಾರ್ ಆರೋಗ್ಯವನ್ನು ವಿಚಾರಿಸಿದರು. ಆದರೆ, ಚಿಕಿತ್ಸೆ ಲಕಾರಿಯಾಗದೆ ಶಿವಕುಮಾರ್ ಮೃತಪಟ್ಟಿದ್ದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕಬಹುದಾದ ಪರಿಹಾರ, ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವೆ ಎಂದು ಸಂಜೆ ತಮ್ಮ ಟ್ವೀಟರ್‌ನಲ್ಲಿ ಡಿಕೆಶಿ ಪ್ರಕಟಿಸಿದ್ದರು. ಬಳಿಕ ಟ್ವೀಟರ್‌ನಲ್ಲಿ ಹಾಕಿದ್ದ ಮಸೇಜ್‌ನ್ನು ಡಿಕೆಶಿ ಅಳಿಸಿಹಾಕಿದ್ದರು.

ಆ.11ರಂದು ಪ್ರಯೋಗಾಲಯ’ ಕಚೇರಿಯಲ್ಲಿ ಬೆಂಜಿನ್ ಕೆಮಿಕಲ್ ಪರೀಕ್ಷಿಸುವಾಗ ನಡೆದ ಅಗ್ನಿ ದುರಂತದಲ್ಲಿ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಸಿರಾಜ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್ ಹಾಗೂ ಗಣಕಯಂತ್ರ ನಿರ್ವಾಹಕ ಮನೋಜ್ ಸೇರಿ 9 ಮಂದಿಗೆ ಸುಟ್ಟ ಗಾಯವಾಗಿತ್ತು. ಇವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಾಯಾಳುಗಳ ಪೈಕಿ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ತುಸು ಹೆಚ್ಚು ಗಾಯಗೊಂಡಿದ್ದ ಶಿವಕುಮಾರ್ ಹಾಗೂ ಜ್ಯೋತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಸತತ 17 ದಿನಗಳ ಕಾಲ ಶಿವಕುಮಾರ್ ಹಾಗೂ ಜ್ಯೋತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಗ್ನಿ ಸುರಕ್ಷತಾ ವ್ಯವಸ್ಥೆಯೇ ಇಲ್ಲ:

ಪಾಲಿಕೆಯ ಪ್ರಯೋಗಾಲಯ’ ಕಚೇರಿಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಲಿಲ್ಲ. ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್‌ಬಿಸಿ) ನಿಯಮದಂತೆ ಪರೀಕ್ಷೆ ಮತ್ತು ಪ್ರಯೋಗ ಮಾಡುವ ಯಾವುದೇ ಕಚೇರಿಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಬೇಕಿತ್ತು. ಈ ವ್ಯವಸ್ಥೆ ಇಲ್ಲದಿರುವ ಕಾರಣ ಆ.11ರಂದು ಪಾಲಿಕೆಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಗಾಯಾಳುಗಳಿಗೆ ಗಂಭೀರ ಗಾಯವಾಗಿತ್ತು.ಅಲ್ಲದೆ, ಬೆಂಕಿ ಹೊತ್ತಿಕೊಂಡಾಗ ಪ್ರಯೋಗಾಲಯದಲ್ಲಿ ಅಗ್ನಿಶಾಮಕ ಉಪಕರಣಗಳೂ ಇರಲಿಲ್ಲ. ಬೆಂಕಿ ನಂದಿಸಲು ಬೇರೆ ಕಡೆಯಿಂದ ಯಂತ್ರಗಳನ್ನು ತರಬೇಕಿತ್ತು. ಅಷ್ಟರೊಳಗೆ ಎಲ್ಲರಿಗೂ ಗಂಭೀರ ಗಾಯವಾಗಿತ್ತು. ಅಗ್ನಿ ಸುರಕ್ಷತಾ ವ್ಯವಸ್ಥೆ ಇದ್ದಿದ್ದರೆ ಇವರಿಗೆ ಗಂಭೀರ ಗಾಯವಾಗುತ್ತಿರಲಿಲ್ಲ.

ಆಂತರಿಕ ವಿಚಾರಣೆ ತನಿಖೆ:

ಪಾಲಿಕೆ ಪ್ರಧಾನ ಅಭಿಯಂತರ ಪ್ರಹ್ಲಾದ್ ನೇತೃತ್ವದ ತಂಡ ಬೆಂಕಿ ಅನಾಹುತ ಬಗ್ಗೆ ತನಿಖೆ ನಡೆಸುತ್ತಿದೆ. ಆ.31ರೊಳಗೆ ಘಟನೆ ಸಂಬಂಧ ತಾಂತ್ರಿಕ ವಿಚಾರಣೆ ವರದಿ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ. ಅದೇರೀತಿ ಹಲಸೂರು ಗೇಟ್ ಪೊಲೀಸರು ಇನ್ನೊಂದು ತನಿಖೆ ನಡೆಸುತ್ತಿದ್ದಾರೆ.

ಚಿಕಿತ್ಸೆ ಮುಂದುವರಿಕೆ:

ಖಾಸಗಿ ಆಸ್ಪತ್ರೆಯಲ್ಲಿ ಮುಖ್ಯ ಅಭಿಯಂತರ ಶಿವಕುಮಾರ್‌ಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ವೈದ್ಯರು ಅಧಿಕೃತವಾಗಿ ಮಾಹಿತಿ ನೀಡುವವರಗೂ ಮತ್ತು ಮೆಡಿಕಲ್ ಬುಲೆಟಿನ್ ಬರುವವರಿಗೂ ಅವರ ಸಾವಿನ ಕುರಿತು ಸುದ್ದಿಯನ್ನು ಪ್ರಸಾರ ಮಾಡಬಾರದು. ಡಿಸಿಎಂ ಡಿಕೆಶಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಶಿವಕುಮಾರ್ ಆರೋಗ್ಯವನ್ನು ವಿಚಾರಿಸಿದ್ದಾರೆ. ವೈದ್ಯರು ವಿಶೇಷ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net