

ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಕಾಂಗ್ರೆಸ್ ಶಾಸಕರು ಮ್ಯಾರಥಾನ್ ಸಭೆ ನಡೆಸಿ ಹಲವು ಪ್ರಮುಖ ವಿಚಾರಗಳ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ.
ಹಿರಿಯ ಶಾಸಕ ರಾಮಲಿಂಗಾರೆಡ್ಡಿ, ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 11 ಶಾಸಕರು ಹಾಜರಿದ್ದರು. ಜಮೀರ್ ಅಹ್ಮದ್ ಗೈರಾಗಿದ್ದರು. ಕೆ.ಆರ್.ಪುರ, ಯಶವಂತಪುರದಲ್ಲಿ ಈ ಹಿಂದೆ ಕಾಂಗ್ರೆಸ್ ಶಾಸಕರಿದ್ದರು. ಉಪ ಚುನಾವಣೆ ಬಳಿಕ ಅಲ್ಲಿ ಬಿಜೆಪಿ ಶಾಸಕರಿದ್ದಾರೆ. ಆರ್.ಆರ್. ನಗರ ಕ್ಷೇತ್ರದಲ್ಲಿ ಕೂಡ ಪಕ್ಷದ ಶಾಸಕರಿಲ್ಲ. ಹೀಗಾಗಿ ಚುನಾವಣೆಯಲ್ಲಿ ಹಿನ್ನಡೆ ಆಗಬಹುದೆಂದು ಊಹಿಸಿರುವ ಕಾಂಗ್ರೆಸ್, ಈಗಲೇ ಮಾಸ್ಟರ್ಪ್ಲಾ್ಯನ್ ರೂಪಿಸಲಾರಂಭಿಸಿದೆ.
ಬಿಬಿಎಂಪಿ ಕ್ಷೇತ್ರಗಳ ಮರು ವಿಂಗಡಣೆ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಕೂಡಲೇ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಲಾಯಿತು. ಸರಿಯಾದ ಕ್ರಮದಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡಿಲ್ಲ, ಕಾಯ್ದೆಯನ್ನು ಉಲ್ಲಂಘಿಸ ಲಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ.
ಬಿಬಿಎಂಪಿಯಲ್ಲಿ ಹೆಚ್ಚು ಕೆಲಸಗಳಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಆದರೆ, ಬಿಜೆಪಿಯವರು ಸಾಮಾಜಿಕ ಜಾಲತಾಣ ಬಳಸಿಕೊಂಡು ಹೆಚ್ಚು ಪ್ರಚಾರ ಪಡೆದುಕೊಳ್ಳು ತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾಲತಾಣವನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ನೋಡಿಕೊಳ್ಳಲು ರಿಜ್ವಾನ್, ಕೃಷ್ಣಬೈರೇಗೌಡರಿಗೆ ಸೂಚಿಸಲಾಯಿತು. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಳ್ಳೋಣ ಎಂದು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತೆಂದು ಮೂಲಗಳು ತಿಳಿಸಿವೆ.
ಈ ಬಾರಿಯದ್ದು ಅತ್ಯಂತ ಸವಾಲಿನ ಚುನಾವಣೆ 2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆ ಯಲ್ಲಿ ಬಿಜೆಪಿ 101 ಕಡೆ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 76, ಜೆಡಿಎಸ್ 14 ಕಡೆ ಮತ್ತು ಪಕ್ಷೇತರರು ಏಳು ಕಡೆ ಗೆಲುವು ಸಾಧಿಸಿದ್ದರು. ಆದರೆ, ವಿಧಾನಪರಿಷತ್ ಹಾಗೂ ಶಾಸಕರ ಮತದಾನದಿಂದ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಅನುಭವಿಸುತ್ತ ಬಂದಿತ್ತು. ಕೊನೆಯ ಅವಧಿಯಲ್ಲಿ ಜೆಡಿಎಸ್ ಕೈಕೊಟ್ಟಿದ್ದರಿಂದ ಬಿಜೆಪಿಗೆ ಅವಕಾಶ ಸಿಕ್ಕಿತ್ತು. ಬಿಬಿಎಂಪಿ ವ್ಯಾಪ್ತಿಯ ಐದು ಪ್ರಭಾವಿ ಶಾಸಕರು ಬಿಜೆಪಿಗೆ ಜಿಗಿದ ಪರಿಣಾಮ ಆ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ದೊಡ್ಡ ಸವಾಲಾಗಲಿದೆ. ಈ ಕಾರಣಕ್ಕೆ ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಪ್ರಯತ್ನ ಆರಂಭಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.