BBKS10: ಗಂಡಸಿನ ಥರ ಆಡು, ಬಳೆ ಹಾಕ್ಕೊಂಡು ಹೆಂಗಸರ ಥರ ಆಡೋದಲ್ಲ!

Untitled design - 2023-11-01T140632.052
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಅದ್ದೂರಿ ಲಾಂಚ್​ ಪಡೆದು ಇಂದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಮನೆಯಲ್ಲಿ ಹಳ್ಳಿ ಸೊಗಡು, ಸಂಪ್ರದಾಯದಂತೆ ಹೊಸ ಟಾಸ್ಕ್​ಗೆ ಸಿದ್ಧಗೊಂಡ ಬಿಗ್​ ಸ್ಪರ್ಧಿಗಳು, ನಗುನಗುತ್ತಲೇ ಶುರುಮಾಡಿ, ತದನಂತರ ಏಕವಚನದಲ್ಲಿ ಕಿತ್ತಾಡಿಕೊಂಡ ತುಣಕು ಇದೀಗ ವೀಕ್ಷಕರಿಗೆ ಆಶ್ಚರ್ಯವನ್ನು ತಂದೊಡ್ಡಿದೆ.

ದಿನದಿಂದ ದಿನಕ್ಕೆ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ಆಡುವ ಆಟದಲ್ಲಿ ಕಾಣಬೇಕಿದ್ದ ಪೈಪೋಟಿ ಕೇವಲ ಮಾತಿನಲ್ಲಿ ಹೆಚ್ಚು ಕಾಣಿಸುವಂತಿದೆ. ಹಳ್ಳಿಮನೆ ಟಾಸ್ಕ್​ನಲ್ಲಿ ಸ್ಪರ್ಧಿಗಳೆಲ್ಲರೂ ಹಳ್ಳಿಯ ಶೈಲಿಯಲ್ಲಿ ಉಡುಗೆ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಟಾಸ್ಕ್​ ಕೊಂಚ ಬಿಗಿಯಾಗುತ್ತಿದ್ದಂತೆ ನಮ್ರತಾ, ವಿನಯ್​ ಮತ್ತು ಕಾರ್ತಿಕ್​, ಸಂಗೀತಾ ಮಧ್ಯೆ ಮಾತಿನ ಕಿಚ್ಚು ತುಸು ಹೆಚ್ಚಿದೆ. ಜಗಳಕ್ಕೆ ಕಾರಣ ಹೀಗಿದೆ..

ಹಳ್ಳಿಮನೆಯಲ್ಲಿ ಹೊತ್ಕೊಂಡಿದೆ ಮಾತಿನ ಬೆಂಕಿ! ನವೆಂಬರ್‍ 1 ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಗ್‌ಬಾಸ್‌, ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟವಾದ ಟಾಸ್ಕ್‌ ಕೊಟ್ಟಿದ್ದರು. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು. ಸಂಗೀತಾ ಮತ್ತು ವಿನಯ್ ಒಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಅದರ ಪ್ರಕಾರವೇ ಟಾಸ್ಕ್‌ ಆರಂಭಗೊಂಡಿತ್ತು.

ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್‌, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೆ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್‌ ಶುರುವಾಗಿದೆಯೋ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ.

ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ ಮತ್ತು ವಿನಯ್‌ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗುವಂತಿದೆ.

ಹೀಗೆ ಜಗಳದ ಕಿಡಿ ಹೊತ್ತಿಕೊಂಡ ಸಂದರ್ಭ ಯಾವುದು? ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ನೋಡಲು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ. ದಿನದ 24 ಗಂಟೆಗಳ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net