'ಯಡಿಯೂರಪ್ಪನವರೇ ನಿಮ್ಮ ಅಂತ್ಯ ಇಂದಿನಿಂದಲೇ ಆರಂಭ..!'

bsy
Published on

ವಿಜಯಪುರ: ಬ್ಲಾಕ್​ಮೇಲ್​ ಮಾಡಿದವರಿಗೆ, ಹಣ ಕೊಟ್ಟವರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗುತ್ತಿದೆ. ಕೆಲವರು ಸಿಡಿ ತೋರಿಸಿ ಹೆದರಿಸಿ ಮಂತ್ರಿ ಸ್ಥಾನ ಪಡೆಯುತ್ತಿದ್ದಾರೆ. ಕೆಲವರು ಜಾತಿ ಮುಂದಿಟ್ಟುಕೊಂಡು ಬ್ಲಾಕ್​ಮೇಲ್​ ಮಾಡಿ ಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದರು. ನಿಜಲಿಂಗಪ್ಪ, ವಿರೇಂದ್ರ ಪಾಟೀಲ, ಜೆ.ಎಚ್​. ಪಟೇಲ್​ ನಮ್ಮ ಸಮುದಾಯಕ್ಕೆ ಗೌರವ ತರುವ ಕೆಲಸ ಮಾಡಿದ್ದರು. ಯಡಿಯೂರಪ್ಪನವರೇ ನಮ್ಮ ಸಮುದಾಯದ ಮಾನ ಮರ್ಯಾದೆ ಕಳೆಯುತ್ತಿದ್ದೀರಿ. ವೀರಶೈವ- ಲಿಂಗಾಯತ ಸಮುದಾಯ ನಿಮ್ಮೊಂದಿಗಿಲ್ಲ. ನೀವು ವೀರಶೈವ-ಲಿಂಗಾಯತ ಸಮುದಾಯ ಮುಂದಿಟ್ಟುಕೊಂಡು ನಮ್ಮ ಹೈಕಮಾಂಡ್​ಗೆ ಬ್ಲಾಕ್​ಮೇಲ್​ ಮಾಡುತ್ತಿದ್ದೀರಿ. ಇನ್ಮುಂದೆ ನಿಮ್ಮ ಅಂತ್ಯ ಆರಂಭವಾಗಲಿದೆ. ಮಕರ ಸಂಕ್ರಮಣದಂದೇ ಸವಾಲು ಹಾಕುತ್ತಿದ್ದು, ನಿಮ್ಮ ಅಂತ್ಯ ಇಂದಿನಿಂದಲೇ ಆರಂಭವಾಗಿದೆ ಎಂದರು. ಇದನ್ನೂ ಓದಿರಿಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ಕೊಟ್ಟಿದ್ದಕ್ಕೆ ಸ್ವಕ್ಷೇತ್ರದಲ್ಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ!

ಕೆಲ ದಿನಗಳ ಹಿಂದೆ ಯಡಿಯೂರಪ್ಪನನ್ನೇ ಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುತಂತ್ರ ನಡೆದಿತ್ತು. ಈಗ ಮಂತ್ರಿ ಆಗಿರುವವರಲ್ಲಿ ಕೆಲವರು ನೆಲಮಂಗಲದ ಗೆಸ್ಟ್​ ಹೌಸ್​ನಲ್ಲಿ ಯಡಿಯೂರಪ್ಪನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನನ್ನೊಂದಿಗೆ ಮಾತುಕತೆ ನಡೆಸಿದ್ದರು. ಯಡಿಯೂರಪ್ಪನನ್ನು ಇಳಿಸಿ ಸಿಎಂ ಆಗಲು ನೂರಾರು ಕೋಟಿ ರೂ. ಖರ್ಚು ಮಾಡಲು ತಯಾರಾಗಿದ್ದರು. ಈ ವಿಚಾರ ಗೊತ್ತಾಗಿ ನಾನೇ ಗಾಬರಿಗೊಂಡಿದ್ದೆ ಎಂದರು ಎಂದು ಸಿಎಂ ವಿರುದ್ಧ ಏಕವಚನದಲ್ಲೇ ಯತ್ನಾಳ ಕಿಡಿಕಾರಿದರು.

ಬ್ಲಾಕ್​ಮೇಲ್​ ಮಾಡಿದವರಲ್ಲಿ ಒಬ್ಬರು ರಾಜಕೀಯ ಕಾರ್ಯದರ್ಶಿಯಾಗಿದ್ದರೆ, ಇನ್ನಿಬ್ಬರು ಮಂತ್ರಿಯಾಗಿದ್ದಾರೆ. ಅದರಲ್ಲಿ ಒಬ್ಬರು ವಿಜಯೇಂದ್ರಗೆ ಹಣ ಸಂದಾಯ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಹೆಸರಿನಿಂದ ಬ್ಲಾಕ್​ಮೇಲ್​ ಮಾಡಿ ಪ್ರಧಾನಿ ಹಾಗೂ ಅಮಿತ್​ ಷಾಗೆ ಮನಸ್ಸಿಲ್ಲದಿದ್ದರೂ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿರಿ ವಿಶ್ವನಾಥ್​ಗೆ ನಾಡದೇವಿ ಚಾಮುಂಡೇಶ್ವರಿ ಶಾಪ ತಟ್ಟಿದೆ… ಪರಿಣಾಮ ಏನಾಗಿದೆ ಗೊತ್ತಾ?

ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣ ಕಿತ್ತೊಗೆಯುವ ಬಗ್ಗೆ ಮಾತನಾಡುತ್ತಿದ್ದು, ಆ ಕೆಲಸ ಮೊದಲು ಕರ್ನಾಟಕದಿಂದಲೇ ಅದೂ ಯಡಿಯೂರಪ್ಪ ಅವರ ಮನೆಯಿಂದಲೇ ಆರಂಭವಾಗಬೇಕು. ಆ ಮೂಲಕ ದೇಶಕ್ಕೆ ಒಂದು ಸಂದೇಶ ರವಾನಿಸಬೇಕು. ಯಡಿಯೂರಪ್ಪ ಮನೆಯಲ್ಲಿ ಒಬ್ಬರು ಸಿಎಂ, ಇನ್ನೊಬ್ಬರು ಲೋಕಸಭೆ ಸದಸ್ಯ, ಮತ್ತೊಬ್ಬರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಇದ್ದಾರೆ. ಯಡಿಯೂರಪ್ಪ ದೆಹಲಿಗೆ ಹೋಗಬೇಕಾದರೆ ಪಕ್ಷದ ಮುಖಂಡರನ್ನು ಕರೆದೊಯ್ಯದೆ ತಮ್ಮ ಪುತ್ರನನ್ನು ಕರೆದೊಯ್ಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net