ಗ್ರಾಮದಲ್ಲಿದ್ದವರಿಗೆಲ್ಲ ಕರೊನಾ ವೈರಸ್ ಸೋಂಕು- ಒಬ್ಬ ಮಾತ್ರ ಬಚಾವ್​ !

corona
Published on

ಧರ್ಮಶಾಲಾ: ಕರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗುತ್ತಿರುವಂತೆ ಭಾಸವಾದರೂ, ಅದು ಸೃಷ್ಟಿಸುತ್ತಿರುವ ತಲ್ಲಣ ಕಡಿಮೆಯಾಗಿಲ್ಲ. ಹಿಮಾಚಲ ಪ್ರದೇಶದ ಲಾಹೌಲ್ ಕಣಿಯ ಸಣ್ಣ ಗ್ರಾಮವೊಂದರಲ್ಲಿ ಎಲ್ಲರಿಗೂ ಕರೊನಾ ವೈರಸ್ ಸೋಂಕು ತಗುಲಿದೆ. ಅದೃಷ್ಟವಶಾತ್ ಒಬ್ಬ ಮಾತ್ರ ಸೋಂಕಿನಿಂದ ಬಚಾವ್ ಆಗಿದ್ದಾನೆ!

ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತೊರಂಗ್ ಗ್ರಾಮದಲ್ಲಿ 42 ಜನರಿದ್ದಾರೆ. ಅವರ ಪೈಕಿ 41 ಜನರಿಗೂ ಮಾರಕ ಸೋಂಕು ತಗುಲಿದೆ. ಕೋವಿಡ್ 19 ಟೆಸ್ಟ್ ಮಾಡಿಸಿದಾಗ ಎಲ್ಲರಿಗೂ ಪಾಸಿಟಿವ್ ಬಂದಿದೆ. ಒಬ್ಬನ ಟೆಸ್ಟ್ ರಿಪೋರ್ಟ್ ಮಾತ್ರ ನೆಗೆಟಿವ್ ಬಂದಿತ್ತು. ಆತನ ಹೆಸರು ಭೂಷಣ್ ಠಾಕೂರ್. ವಯಸ್ಸು 52. ಈ ಪೈಕಿ ಎಲ್ಲರೂ ಚಳಿಗಾಲವಾದ ಕಾರಣ ಕುಲುವಿನಿಂದ ವಲಸೆ ಬಂದವರು.

ಠಾಕೂರ್ ಮಾಧ್ಯಮದವರ ಬಳಿ ಹೇಳಿದ್ದಿಷ್ಟು - ಎಲ್ಲರಿಗೂ ಅನಾರೋಗ್ಯ ಬಂದ ಕಾರಣ ಕಳೆದ ನಾಲ್ಕಾರು ದಿನಗಳಿಂದ ನಾನೊಬ್ಬ ಪ್ರತ್ಯೇಕವಾಗಿದ್ದೇನೆ. ಕರೊನಾ ಸೋಂಕು ತಡೆಯುವುದಕ್ಕೆ ಅಗತ್ಯ ಮುಂಜಾಗ್ರತಾ ಕ್ರಮವನ್ನು ಎಲ್ಲರೂ ತೆಗೆದುಕೊಂಡಿದ್ದೇವೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್​ ಧರಿಸುವುದು ಎಲ್ಲವನ್ನೂ ಮಾಡುತ್ತಿದ್ದೇವೆ. ಈ ರೋಗವನ್ನು ಯಾರೂ ಲಘುವಾಗಿ ಪರಿಗಣಿಸಬಾರದು.

ಲಾಹೌಲ್ ಸ್ಪಿಟಿ ಜಿಲ್ಲೆಯಲ್ಲಿ 30,000 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಅವರ ಪೈಕಿ ಬಹುತೇಕರು ವಲಸೆ ಹೋಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 856 ಜನ ಸೋಂಕು ಪೀಡಿತರಾಗಿದ್ದಾರೆ. ಇಲ್ಲಿ ಬಹುತೇಕ ಚಟುವಟಿಕೆಗಳು ನಿರ್ಬಂಧಿಸಲ್ಪಟ್ಟಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net