ಗಾಂಧಿ ಭಾರತ ಬೃಹತ್ ಕಾರ್ಯಕ್ರಮಕ್ಕೆ ಬಾರಕ್​ ಒಬಾಮಾ!.. ಕೆಪಿಸಿಸಿ ಅಧ್ಯಕ್ಷ DK Shivakumar ಹೇಳಿದಿಷ್ಟು?

dk (5)
Published on

ಬೆಳಗಾವಿ: ಇದೇ ಡಿ.26, 27ರಂದು ಬೆಳಗಾವಿಯಲ್ಲಿ ನಡೆಯುವ ಬೃಹತ್ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬಂದು ಭಾಷಣ ಮಾಡುವ ಆಲೋಚನೆ ಇತ್ತು. ಸಮಯ ಹಾಗೂ ಭದ್ರತೆ ವಿಚಾರಗಳಿವೆ, ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​(DK Shivakumar )ಹೇಳಿದರು.

ಇಲ್ಲಿನ ಬೆಳಕವಾಡಿಯ ವೀರಸೌಧದ ಬಳಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು. ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಒಬಾಮಾ ಆಗಮಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ.

ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆಯನ್ನು ಇಲ್ಲಿ ಆಯೋಜನೆ ಮಾಡಲಾಗುವುದು. ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ಮಹಾತ್ಮಾ ಗಾಂಧಿಜಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಲು ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿಯನ್ನು ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ನಾವೆಲ್ಲರೂ ಇದರ ಫಲವನ್ನು ಅನುಭವಿಸುತ್ತಿದ್ದು, ಈ ಶತಮಾನೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದರು.

ನೂರು ವರ್ಷದ ಈ ಸಂಭ್ರಮವನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಎಂಬ ಕಾರ್ಯಕ್ರಮದ ಅಡಿ ವರ್ಷಪೂರ್ತಿ ಆಚರಣೆಗೆ ಮುಂದಾಗಿದ್ದೇವೆ. ಗಾಂಧಿ ಭಾರತದ ಚಿಹ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಿದ್ದಾರೆ. ನೂರು ವರ್ಷದ ಹಿಂದೆ ಮಹಾತ್ಮಾ ಗಾಂಧಿಜಿ ಅವರು ಅಲಂಕರಿಸಿದ ಸ್ಥಾನದಲ್ಲಿ ಈಗ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ  ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು. ಗಾಂಧೀಜಿ ಅವರು ಬಂದು ಹೋಗಿದ್ದ ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net