

America: ಅಮೆರಿಕದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಮತ್ತೊಂದು ದಾಳಿಯಲ್ಲಿ ಇಂಡಿಯಾನಾದ ಗ್ರೀನ್‌ವುಡ್ ನಗರದಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯವನ್ನು ಭಾರತ ವಿರೋಧಿ ಬರಹದಿಂದ ಧ್ವಂಸಗೊಳಿಸಲಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಹಿಂದೂ ಅಮೇರಿಕನ್ ಫೌಂಡೇಶನ್, ದೇವಾಲಯದ ಆವರಣವು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿರುದ್ಧ ಘೋಷಣೆಗಳಿಂದ ವಿರೂಪಗೊಂಡಿರುವುದನ್ನು ತೋರಿಸುತ್ತಿದೆ.ಅಲ್ಲದೆ, ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಈ ಘಟನೆಯನ್ನು ಖಂಡನೀಯ" ಎಂದು ಕರೆದಿದೆ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿಗೆ ಹಿಂದೂ ಮಂದಿರವನ್ನು ಅಪವಿತ್ರಗೊಳಿಸಲಾಗಿದೆ. ಈ ಬಾರಿ ಇಂಡಿಯಾನಾದ ಗ್ರೀನ್‌ವುಡ್‌ನಲ್ಲಿರುವ ಬಿಎಪಿಎಸ್ ಮಂದಿರವನ್ನು ಗುರಿಯಾಗಿಸಲಾಗಿದೆ. ಭಾರತ ವಿರೋಧಿ ಗೀಚುಬರಹಗಳೊಂದಿಗೆ ದೇವಾಲಯಗಳನ್ನು ಧ್ವಂಸ ಮಾಡುವುದು ಖಲಿಸ್ತಾನ್ ಪ್ರತ್ಯೇಕತಾವಾದಿ ಕಾರ್ಯಕರ್ತರು ಹೆಚ್ಚಾಗಿ ಬಳಸುವ ತಂತ್ರವಾಗಿದೆ.
ದೇವಾಲಯದ ದಾಳಿಯ ವಿಷಯವನ್ನು ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿ, ತ್ವರಿತ ಕ್ರಮ ಕೈಗೊಳ್ಳುವಂತೆ ವಿನಂತಿಸಿರುವುದಾಗಿ ಶಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಿಳಿಸಿದೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಕಾನ್ಸುಲೇಟ್, ಇಂಡಿಯಾದ ಗ್ರೀನ್‌ವುಡ್‌ನಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದ ಮುಖ್ಯ ನಾಮಫಲಕವನ್ನು ಅಪವಿತ್ರಗೊಳಿಸಿರುವುದು ಖಂಡನೀಯ. ಕಾನ್ಸುಲೇಟ್ ಸಮುದಾಯದೊಂದಿಗೆ ಸಂಪರ್ಕದಲ್ಲಿದೆ ಮತ್ತು ತ್ವರಿತ ಕ್ರಮಕ್ಕಾಗಿ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಎತ್ತಿದ್ದೇವೆ ಎಂದು ತಿಳಿಸಿದೆ.(ಏಜೆನ್ಸೀಸ್)