ಬಂಟ್ವಾಳ ಪುರಸಭೆ 25.25 ಲಕ್ಷ ರೂ. ಮಿಗತೆ ಬಜೆಟ್: ಪ್ರತಿಪಕ್ಷಗಳ ವಿರೋಧ ಮಧ್ಯೆಯೂ ಆಡಳಿತ ಪಕ್ಷದಿಂದ ಅಂಗಿಕಾರ: ಅನುದಾನ ಕೊರತೆ ಕಳವಳ

10
Published on

ಬಂಟ್ವಾಳ: ಪ್ರತಿಪಕ್ಷಗಳ ತೀವ್ರ ಆಕ್ಷೇಪದ ಮಧ್ಯೆಯೂ 25.25 ಲಕ್ಷ ರೂ. ಮಿಗತೆ ಬಜೆಟನ್ನು ಬಂಟ್ವಾಳ ಪುರಸಭೆ ಬುಧವಾರ ಮಂಡಿಸಿದೆ. ಪುರಸಭಾಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಲಾಗಿದ್ದು, ಆರಂಭಿಕ ಶಿಲ್ಕು ಸೇರಿಸಿ ಒಟ್ಟು 48,41,09,904 ರೂ. ಅಂದಾಜು ಆದಾಯ ಹಾಗೂ 36,63,78,010 ರೂ. ಖರ್ಚು ನಿರೀಕ್ಷಿಸಿ 25,25,997 ರೂಪಾಯಿಯ ಉಳಿತಾಯ ಬಜೆಟನ್ನು ಮಂಡಿಸಲಾಯಿತು.

ಬಜೆಟ್ ಮೇಲಿನ ಚರ್ಚೆಯ ವೇಳೆ, ಈ ಬಜೆಟ್‌ಗೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ ಅಂತಿಮವಾಗಿ ಆಡಳಿತ ಪಕ್ಷದ ಚಪ್ಪಾಳೆಯ ಅನುಮೋದನೆಯೊಂದಿಗೆ, ವಿರೋಧ ಪಕ್ಷದ ಲಿಖಿತ ಆಕ್ಷೇಪ ದಾಖಲಿಸಿಕೊಂಡು ಸಭೆ ಆಯವ್ಯಯ ಅಂಗೀಕರಿಸಿಕೊಂಡಿತು.

ಪುಸ್ತಕದ ಬದನೆಕಾಯಿ: ಈ ಬಜೆಟ್ ಕೇವಲ ಪುಸ್ತಕದ ಬದನೆಕಾಯಿಯಾಗಿದೆ. 28 ಮಂದಿ ಸದಸ್ಯರಿಗೆ ಅಭಿವೃದ್ಧಿ ಕಾರ್ಯಗಳಿಗೆ ಕೇವಲ 88 ಲಕ್ಷ ರೂ. ಮಾತ್ರ ಮೀಸಲಿಡಲಾಗಿದೆ. ಅಂದರೆ ಓರ್ವ ಸದಸ್ಯನಿಗೆ ಕೇವಲ 3ರಿಂದ 4 ಲಕ್ಷ ರೂ. ಒಂದು ವರ್ಷಕ್ಕೆ ಇಷ್ಟು ಸಣ್ಣ ಮೊತ್ತ ಸಾಕಾಗಬಹುದೇ ಎಂದು ವಿರೋಧ ಪಕ್ಷದ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಈ ಬಜೆಟ್‌ಗೆ ನಾವು ಅನುಮೋದನೆ ನೀಡುವುದಿಲ್ಲ. ಬಜೆಟ್ ನಿಮಗೆ ಬೇಕಾದಂತೆ ಮಂಡಿಸುವ ಹಾಗಿಲ್ಲ. ಸರಿ ಮಾಡಿ ಮುಂದಿನ ಸಭೆಯಲ್ಲಿ ಮಂಡಿಸಿ ಎಂದು ಆಗ್ರಹಿಸಿದರು. ಮಿಗತೆ ಬಜೆಟ್ ಮಂಡಿಸಬೇಕಾದರೆ ಅಷ್ಟು ಉಳಿತಾಯ ನಮ್ಮಲ್ಲಿ ಇರಬೇಕು. ಕಳೆದ ವರ್ಷ ಕೊರತೆ ಬಜೆಟ್ ಮಂಡಿಸಿ ಈ ವರ್ಷ ಏಕಾಏಕಿ ಹೇಗೆ ಉಳಿತಾಯ ಬಜೆಟ್ ಮಂಡಿಸುತ್ತೀರಿ? ಅಷ್ಟು ಆದಾಯ ಎಲ್ಲಿಂದ ತರುತ್ತೀರಿ ಎಂದು ವಿರೋಧ ಪಕ್ಷದ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಪ್ರಶ್ನಿಸಿದರು.

ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪ್ರತಿಕ್ರಿಯಿಸಿ ರೆವಿನ್ಯೂ ಹೆಚ್ಚಿಸಿರುವುದರಿಂದ ಆದಾಯ ಹೆಚ್ಚು ಬರಲಿದೆ. ಈ ಬಜೆಟನ್ನು ಬೆಂಗಳೂರಿನಲ್ಲಿ ಪರಿಣಿತರಿಂದ ಪರಿಶೀಲಿಸಲಾಗಿದ್ದು ಎಲ್ಲ ವಿವರಗಳು ಸರಿಯಾಗಿವೆ. ಸದಸ್ಯರು ಸೂಚಿಸಿದ ದೋಷಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷ ವಾಸು ಪೂಜಾರಿ, ಉಪಾಧ್ಯಕ್ಷ ಮೂನೀಶ್ ಅಲಿ ಉಪಸ್ಥಿತರಿದ್ದರು. ಸದಸ್ಯರಾದ ಮಹಮ್ಮದ್ ಶರೀಫ್, ಜನಾರ್ದನ ಚೆಂಡ್ತಿಮಾರ್, ಲುಕ್ ಮಾನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net